

ಕೀರ್ತಿನಾರಾಯಣ ಸಿ. ಬೆಂಗಳೂರು
ಬಿಟ್ ಕಾಯಿನ್ ಹಗರಣದಲ್ಲಿ ನೇರವಾಗಿ ಭಾಗಿಯಾದ ಆರೋಪದಲ್ಲಿ ತನಿಖಾಧಿಕಾರಿಗಳ ಬಂಧನವಾದ ಬೆನ್ನಲ್ಲೇ ಅವ್ಯವಹಾರದಲ್ಲಿ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಅವರ ಮಕ್ಕಳಿಗೆ ನಡುಕ ಶುರುವಾಗಿದೆ. ಏತನ್ಮಧ್ಯೆ ಹಗರಣದಲ್ಲಿ ನಡೆದಿರುವ ಬಿಟ್ ಕಾಯಿನ್ ವಹಿವಾಟಿನ ರೂಪಾಯಿ ಮೌಲ್ಯ ಸಾವಿರಾರು ಕೋಟಿ ಎಂದು ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಬಂಧಿತ ಇನ್ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ಹಾಗೂ ಜಿಸಿಐಡಿ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಸಂತೋಷ್ ಕುಮಾರ್ ವಿಚಾರಣೆಯನ್ನು ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ತೀವ್ರಗೊಳಿಸಿದೆ. ಎಫ್ಐಆರ್ನಲ್ಲಿ ಹೆಸರಿರುವ ಡಿವೈಎಸ್ಪಿ ಶ್ರೀಧರ ಕೆ. ಪೂಜಾರ, ಇನ್ಸ್ಪೆಕ್ಟರ್ಗಳಾದ ಲಕ್ಷಿ್ಮೕಕಾಂತಯ್ಯ, ಚಂದ್ರಾಧರ ಬಂಧನ ನಿಶ್ಚಿತವಾಗಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ದಸ್ತಗಿರಿಯಾಗಬಹುದು.
ಅಪರಾಧ ದಂಡ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 41 (ಸಿ) ಪ್ರಕಾರ (ಮ್ಯಾಜಿಸ್ಟ್ರೇಟ್ ಆದೇಶ ಅಥವಾ ವಾರಂಟ್ ಇಲ್ಲದೆ ಬಂಧಿಸಲು ಅವಕಾಶ) ಮೂವರಿಗೂ ಎಸ್ಐಟಿ ನೋಟಿಸ್ ಜಾರಿ ಮಾಡಿದೆ. ಅವ್ಯವಹಾರದಲ್ಲಿ ಭಾಗಿಯಾಗಿ ರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿರುವುದರಿಂದ ಬಂಧಿಸುತ್ತೇವೆ ಎಂದೇ ಆರೋಪಿಗಳಿಗೆ ಸೂಚನೆ ಕೊಡಲಾಗಿದೆ. ಬಂಧಿತ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸಂತೋಷ್ ಕುಮಾರ್ ವಿಚಾರಣೆಯಲ್ಲಿ ನೀಡುವ ಹೇಳಿಕೆಯ ಆಧಾರದ ಮೇಲೆ ಹಗರಣದ ನಂಟು ಹೊಂದಿರುವ ‘ಪ್ರಭಾವಿ’ಗಳ ಭವಿಷ್ಯ ನಿಂತಿದೆ. 2020ರಲ್ಲಿ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ರಾಬಿನ್ ಖಂಡೇಲ್ವಾಲ್ನ ಕ್ರಿಪ್ಟೋ ವ್ಯಾಲೆಟ್ಗಳಲ್ಲಿದ್ದ 1,83,624 ರೂ. ಮೌಲ್ಯದ ಬಿಟ್ ಕಾಯಿನ್ಗಳನ್ನು ಬಂಧಿತ ಆರೋಪಿ ಸಂತೋಷ್ ಕುಮಾರ್ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಅದೇ ರೀತಿ ಶ್ರೀಕಿಯಿಂದಲೂ ಹಲವಾರು ಬಿಟ್ ಕಾಯಿನ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿಸಿರುವುದು, ಹ್ಯಾಕಿಂಗ್ಗೆ ಪ್ರಯತ್ನಿಸಿರುವುದು ತಾಂತ್ರಿಕ ವಿಶ್ಲೇಷಣಾ ವರದಿಯಲ್ಲಿ ದೃಢಪಟ್ಟಿದೆ ಎಂದು ಎಸ್ಐಟಿ ಅಧಿಕಾರಿಗಳೇ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ 1 ಬಿಟ್ ಕಾಯಿನ್ನ ರೂಪಾಯಿ ಮೌಲ್ಯ 34 ಲಕ್ಷ . ಪ್ರತಿಷ್ಠಿತ ಬಿಟ್ ಕಾಯಿನ್ ಎಕ್ಸ್ಚೇಂಜ್ ವೆಬ್ಸೈಟ್ಗಳಲ್ಲಿ ಲಕ್ಷಾಂತರ ಬಿಟ್ ಕಾಯಿನ್ಗಳು ಇರುತ್ತವೆ. ಅಂತಹ ವೆಬ್ಸೈಟ್ಗಳನ್ನು ಶ್ರೀಕಿ ಹ್ಯಾಕ್ ಮಾಡಿದ್ದಾನೆ. 2021 ಜ.15ರಂದು 31 ಬಿಟ್ ಕಾಯಿನ್ಗಳನ್ನು ಶ್ರೀಕಿ ಖಾತೆಯಿಂದ ಜಪ್ತಿ ಮಾಡಿರುವುದಾಗಿ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿ ಮಾಡಿ ಘೋಷಿಸಿದ್ದರು. 31 ಬಿಟ್ ಕಾಯಿನ್ ರೂಪಾಯಿ ಮೌಲ್ಯವೇ 10 ಕೋಟಿ ರೂ. ಇದೆ. ಇನ್ನು ಶ್ರೀಕಿಯ ವ್ಯಾಲೆಟ್ನಲ್ಲಿ 186.811 ಬಿಟ್ ಕಾಯಿನ್ಗಳಿದ್ದವು. ಅವುಗಳ ಜಪ್ತಿಗೆ ಕೋರ್ಟ್ ಅನುಮತಿ ಕೊಟ್ಟಿತ್ತು. ಇದರ ಈಗಿನ ಮೌಲ್ಯ 63.78 ಕೋಟಿ ರೂ. ಇದ್ಯಾವುದನ್ನು ಅಧಿಕೃತವಾಗಿ ಆಗಿನ ತನಿಖಾಧಿಕಾರಿಗಳು ದಾಖಲಿಸಿಲ್ಲ.
ಪ್ರಕರಣಕ್ಕೂ ಹ್ಯಾಕರ್ ಶ್ರೀಕಿ ನಂಟಿರುವುದು ಗೊತ್ತಾಗಿತ್ತು. 2016 ಆಗಸ್ಟ್ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್ಫಿನೆಕ್ಸ್ ವೆಬ್ಸೈಟ್ ಅನ್ನು ನ್ಯೂಯಾರ್ಕ್ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಹ್ಯಾಕ್ ಮಾಡಿ 1,19,754 ಬಿಟ್ ಕಾಯಿನ್ ಕದ್ದಿದ್ದರು. ಇದೇ ಸಂದರ್ಭದಲ್ಲಿ ಬಿಟ್ಫಿನೆಕ್ಸ್ ವೆಬ್ಸೈಟ್ ಹ್ಯಾಕ್ ಮಾಡಿದ ಮೊದಲ ಹ್ಯಾಕರ್ ತಾನೇ ಎಂದು ಶ್ರೀಕೃಷ್ಣ ಹೇಳಿಕೊಂಡಿದ್ದ. ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂಬುದಕ್ಕೆ ಈ ಪ್ರಕರಣವೂ ಸಾಕ್ಷ್ಯವಾಗಿದೆ.
ಶ್ರೀಕಿ ಹಾಗೂ ರಾಬಿನ್ ವ್ಯಾಲೆಟ್ನಲ್ಲಿದ್ದ ಬಿಟ್ ಕಾಯಿನ್ಗಳು ಹಾಗೂ ಕ್ರಿಪ್ಟೋ ಕರೆನ್ಸಿ ಎಕ್ಸ್ಚೆಂಜ್ ವೆಬ್ಸೈಟ್ಗಳಿಂದ ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ಗಳನ್ನು ಕೆಲ ಪ್ರಭಾವಿ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳ ವ್ಯಾಲೆಟ್ಗಳಿಗೆ ವರ್ಗಾವಣೆಯಾಗಿದೆ. ಅದರ ರೂಪಾಯಿ ಮೌಲ್ಯ ಸಾವಿರಾರು ಕೋಟಿ ರೂ. ಇದೆ. ಆ ಹಣವನ್ನು ಸ್ಥಳೀಯ ಬ್ಯಾಂಕ್ಗಳಲ್ಲಿ ನಗದು ರೂಪದಲ್ಲಿ ಹಂತಹಂತವಾಗಿ ಡ್ರಾ ಮಾಡಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಸಾಕ್ಷ್ಯನಾಶ ಬಗ್ಗೆ ಎಚ್ಚರಿಸಿದ್ದ ಸೈಬರ್: ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಪ್ರಭಾವಿಗಳಿಗೆ ಉರುಳಾಗುವಂಥ ‘ಸಾಕ್ಷ್ಯನಾಶ’ಪಡಿಸಿರುವ ಬಗ್ಗೆ ಆಗಲೇ ಸಿಐಡಿ ಸೈಬರ್ ಅಧಿಕಾರಿಗಳ ತನಿಖೆಯಲ್ಲಿ ದೃಢಪಟ್ಟಿತ್ತು. ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ. ಆಗ ಮಾತ್ರ ಸತ್ಯ ಬಯಲಾಗಲಿದೆ. ಹೀಗಾಗಿ ಸಾಕ್ಷ್ಯನಾಶಪಡಿಸಿರುವ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿಗೆ ಸೈಬರ್
ಸಿಐಡಿಗೂ ಮುನ್ನ ಸಿಸಿಬಿ ಸೆರೆ: 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್ವೆುಂಟ್ ವೆಬ್ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ, 11.55 ಕೋಟಿ ರೂ. ಎಗರಿಸಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಕಿ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾ್ಯಕ್ ಮಾಡಿ 1.44 ಕೋಟಿ ರೂ. ಜಪ್ತಿ ಮಾಡಿದ್ದರು. ಇದೇ ಪ್ರಕರಣದಲ್ಲಿ ಶ್ರೀಕಿ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಖೆಡ್ಡಾ ತೋಡಿದ್ದರು. ಸಿಐಡಿಗೂ ಮುನ್ನವೇ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿ ತಂಡದಲ್ಲಿದ್ದ ತನಿಖಾಧಿಕಾರಿಗಳೇ ಈಗ ಆರೋಪಿ ಸ್ಥಾನದಲ್ಲಿದ್ದು, ಬಂಧಿತರಾಗುತ್ತಿದ್ದಾರೆ.
ಅಧಿಕಾರಿಗಳಿಗೆ ಸಂತೋಷ್ಕುಮಾರ್ ಆಪ್ತ: ಎಚ್ಎಸ್ಆರ್ ಲೇಔಟ್ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಸಂತೋಷ್ ಕುಮಾರ್ ಪೊಲೀಸ್ ಇಲಾಖೆಯಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳಿಗೆ ಆಪ್ತನಾಗಿದ್ದ. ಈತನ ಮುಖಾಂತರವೇ ಬಿಟ್ ಕಾಯಿನ್ ಹಗರಣ ನಡೆದಿದೆ. ಸಂತೋಷ್ ಹೇಳಿಕೆ ಆಧರಿಸಿ ಈತನ ಜತೆ ಗುರುತಿಸಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಶುರುವಾಗಲಿದೆ.