

ಬೆಂಗಳೂರು: ಡ್ರಗ್ಸ್ ಪ್ರಕರಣವೊಂದರಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗಲೇ ಬಿಟ್ ಕಾಯಿನ್ ಮಾಹಿತಿ ಬಯಲಾಗಿದೆ. ಈ ಪ್ರಕರಣವನ್ನು ಬಯಲಿಗೆಳೆದದ್ದೇ ರಾಜ್ಯ ಬಿಜೆಪಿ ಸರ್ಕಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸಪ್ತ ಸಚಿವರ ವಸತಿ ಸಮುಚ್ಚಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಯಾರನ್ನೋ ರಕ್ಷಿಸುವ ಪ್ರಶ್ನೆಯೇ ಉದ್ಭವಿಸದು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆ ಡ್ರಗ್ಸ್ ದಂಧೆ ವಿರುದ್ಧ ಸಮರವನ್ನೇ ಸಾರಿ, ಇಡೀ ಜಾಲ ಬೇಧಿಸುವುದಕ್ಕೆ ಪೊಲೀಸರಿಗೆ ಬೆಂಬಲವಾಗಿ ನಿಂತರು. ಸಿಎಂ ಆದ ಬಳಿಕ ಅದೇ ದಕ್ಷ, ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತ ಮುಂದುವರಿಸಿದ್ದು, ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರ, ಬೊಮ್ಮಾಯಿ ಗಳಿಸುತ್ತಿರುವ ವರ್ಚಸ್ಸು ವೃದ್ಧಿ ಸಹಿಸಲಾಗದೆ ಆಧಾರವಿಲ್ಲದ ಆರೋಪ ಹೊರಿಸಿ ಕಳಂಕಿತರು ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವ್ಯರ್ಥ ಕಸರತ್ತು: ಆರೋಪಿ ಶ್ರೀಕಿ ಸ್ವತಃ ಮದ್ಯವ್ಯಸನಿ ಎಂದು ಒಪ್ಪಿಕೊಂಡಿದ್ದಾನೆ. ಮದ್ಯವ್ಯಸನಿ ಮಾತುಗಳಿಗೆ ಕಾಂಗ್ರೆಸ್ನವರು ಪ್ರಾಶಸ್ಱ ನೀಡಿದ್ದಾರೆ. ಆರೋಪಿ ಒಂದೊಂದು ಬಾರಿ ಒಂದೊಂದು ರೀತಿ ಹೇಳಿಕೆ ನೀಡಿದ್ದು, ಹಗರಣವಾಗಿದೆ ಎಂದು ಆರೋಪಿಸುವ ಮುನ್ನ ಕೈ ನಾಯಕರು ಪೂರ್ವಾಪರ ವಿಮರ್ಶೆ ಮಾಡಬೇಕಾಗಿತ್ತು ಎಂದರು. ಬಿಟ್ಕಾಯಿನ್ ಯಾರಿಗೂ ವರ್ಗಾವಣೆಯಾಗಿಲ್ಲ. ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ನಡೆದಿದ್ದು, ವಿಚಾರಣೆ ಪೂರ್ತಿ ವಿಡಿಯೋ ಮಾಡಿಕೊಂಡು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ಪ್ರಕರಣದ ಸತ್ಯಾಂಶ ಶೀಘ್ರವೇ ಜನರಿಗೆ ಗೊತ್ತಾಗಲಿದೆ. ದೊಡ್ಡ ಹಗರಣ, ಪ್ರಭಾವಿಗಳು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಸಂಕಷ್ಟವೆಂದು ಬಿಂಬಿಸಲು ಹೊರಟವರು ನಗೆಪಾಟಲಿಗೆ ಈಡಾಗಲಿದ್ದಾರೆ. ಸುಳ್ಳನ್ನೇ ಪದೇಪದೆ ಹೇಳಿ ಸತ್ಯವಾಗಿಸಲು ಕಾಂಗ್ರೆಸ್ನವರು ವ್ಯರ್ಥ ಕಸರತ್ತು ನಡೆಸಿದ್ದು, ಇಂತಹ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಜನಪ್ರಿಯತೆಗಾಗಿ ಅಪಪ್ರಚಾರ: ಬಿಟ್ಕಾಯಿನ್ ಹಗರಣದ ಸೃಷ್ಟಿಯಲ್ಲಿ ಹೊಸ ಪಾತ್ರಧಾರಿಗಳು ಹುಟ್ಟಿಕೊಂಡಿದ್ದು, ಪ್ರಕರಣದ ತಿರುಚಿದ ಸಂಗತಿಗಳನ್ನು ಆಧರಿಸಿ ಅಗ್ಗದ ಜನಪ್ರಿಯತೆಗಾಗಿ ಅಪಪ್ರಚಾರ ತಂತ್ರವೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿರುಗೇಟು ನೀಡಿದ್ದಾರೆ. ದೊಡ್ಡ ಹಗರಣವಾಗಿದ್ದು, ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪವನ್ನು ಗಣೇಶ್ ಕಾರ್ಣಿಕ್ ಸಾರಾಸಗಟು ತಳ್ಳಿ ಹಾಕಿದ್ದು, ಕಾಂಗ್ರೆಸ್ ನಾಯಕರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಬಿಟ್ ಕಾಯಿನ್ ಹಗರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವು ಪಡೆಯುತ್ತಿರುವುದರಿಂದ ಆತಂಕಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಬಿಜೆಪಿ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಅವರ ಜತೆ ಬಿಟ್ ಕಾಯಿನ್ ಪ್ರಕರಣ ಕುರಿತಂತೆ ಸಿಎಂ ಸುದೀರ್ಘ ಸಮಾಲೋಚನೆ ಮಾಡಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ ಬಿಟ್ ಕಾಯಿನ್ ಹಗರಣದ ಸಂಪೂರ್ಣ ಮಾಹಿತಿ ನೀಡಿ, ತಮ್ಮದೇನು ತಪ್ಪಿಲ್ಲವೆಂಬ ವಿವರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನ ಮಾಡುತ್ತಿದೆ. ಆದರೆ, ನಮ್ಮ ಪಕ್ಷದವರು ಬಲವಾಗಿ ಸಮರ್ಥನೆ ಮಾಡುತ್ತಿಲ್ಲ. ಪಕ್ಷದ ಸಾಮಾಜಿಕ ಜಾಲತಾಣದಲ್ಲಿಯೂ ಸರಿಯಾಗಿ ಉತ್ತರ ನೀಡುವ ಕಾರ್ಯ ನಡೆಯುತ್ತಿಲ್ಲ. ಪಕ್ಷದ ಕೆಲ ಹಿರಿಯ ಮುಖಂಡರು ಹೇಳಿಕೆ ನೀಡುವಾಗ ಅನತ್ಯವಾಗಿ ನನ್ನ ಹಾಗೂ ನನ್ನ ಪುತ್ರನ ಹೆಸರು ಪ್ರಸ್ತಾಪ ಮಾಡುತ್ತಾರೆ. ಇದು ಸಾರ್ವಜನಿಕವಾಗಿ ಅನುಮಾನಕ್ಕೆ ಕಾರಣವಾಗುತ್ತದೆ. ನಮ್ಮ ಪಕ್ಷದ ಮುಖಂಡರೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡುತ್ತಿರುವ ಅನುಮಾನಗಳಿವೆ. ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೂ ಚರ್ಚೆ ನಡೆಸಿದ್ದೇನೆ. ತಾವು ಸಹ ವರಿಷ್ಠರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ಬಿಟ್ ಕಾಯಿನ್ ದಂಧೆಯ ಪ್ರಮುಖ ಆರೋಪಿ ಶ್ರೀಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಆಪ್ತ ಪ್ರಸಿದ್ಧ್ಶೆಟ್ಟಿ ಜಾಮೀನು ನೀಡಿದ್ದಾನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಪ್ರಸಿದ್ಧ್ಶೆಟ್ಟಿ ಜನಧನ್ ಖಾತೆಯಿಂದ ಹಣ ಕದಿಯುವ ವ್ಯಕ್ತಿಯಾಗಿದ್ದಾನೆ. ಇದನ್ನು ಮಾಡಿಸಿದ್ದು ಬಿಜೆಪಿಯವರೇ. ಈ ಹೇಳಿಕೆಯನ್ನು ನಾನು ನೀಡುತ್ತಿಲ್ಲ. ಆತ ಬರೆದಿರುವ ಪತ್ರದಲ್ಲಿ ಇದೆಲ್ಲ ಇದೆ. ಇದೆಲ್ಲ ಜನಸಾಮಾನ್ಯರ ಹಣ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಖಾತೆಗಳಿಂದ ಹಣ ಲಪಟಾಯಿಸಲಾಗಿದೆ. ರಾಜ್ಯ ಸರ್ಕಾರದ ಖಾತೆಗಳಿಂದ 2 ಸಾವಿರ ಕೋಟಿ ರೂ., ಕೇಂದ್ರ ಸರ್ಕಾರದ ಖಾತೆಗಳಿಂದ 6 ಸಾವಿರ ಕೋಟಿ ರೂ. ಹಣ ದೋಚಿದ್ದಾನೆ. ಇವರು ಶ್ರೀಕಿಯನ್ನು ಒಂದೊಂದು ತಿಂಗಳು ಬಿಡ್ ತೆಗೆದುಕೊಳ್ಳುತ್ತಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಈ ದಂಧೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೇರಿ ಬಿಜೆಪಿ ನಾಯಕರ ಪಾತ್ರ ಏನಿದೆ ಎಂಬ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನು ಬಿಜೆಪಿ ಬಿಡಬೇಕು. ಬಿಟ್ ಕಾಯಿನ್ ದಂಧೆಯಲ್ಲಿ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಶ್ರೀಕಿಯನ್ನು ಸ್ಟಾರ್ ಹೋಟೆಲ್ನಲ್ಲಿ ಇರಿಸಿ ದಂಧೆ ನಡೆಸುತ್ತಿದ್ದರು. ಶ್ರೀಕಿಗೆ ತಿಂಗಳಿಗೆ 60 ಲಕ್ಷ ರೂ. ನೀಡಲಾಗುತಿತ್ತು. 1,400 ಬಿಟ್ ಕಾಯಿನ್ ಕದಿಯಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದರು. ನೀವು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಾವು ಬೇರೆ ರೀತಿ ಮಾಡುತ್ತೇವೆ ಎಂದು ಜೋ ಬೈಡನ್ ಎಚ್ಚರಿಸಿದ್ದರು. ನಂತರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಪಾತ್ರ ಇದೆ ಎಂದು ಆರೋಪಿಸಿದರು.