ಲಿಂಗತ್ವ ಅಲ್ಪಸಂಖ್ಯಾತರಿಗೂ ಅನ್ನಭಾಗ್ಯ

klr padmavathi
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಮಾತನಾಡಿದರು. ನಾರಾಯಣಸ್ವಾಮಿ ಇದ್ದರು.
Published on

ಕೋಲಾರ: ಲಿಂಗತ್ವ ಅಲ್ಪಸಂಖ್ಯಾತರಿಗೂ ಅನ್ನಭಾಗ್ಯ ಯೋಜನೆ ಸೌಲಭ್ಯ ತಲುಪಿಸಲು ಮುಖ್ಯಮಂತ್ರಿ, ಆಹಾರ ಸಚಿವರ ಬಳಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಹ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರ ನೀಡಲಾಗುತ್ತಿದೆ. ಅವರ ಬಳಿ ಯಾವುದೇ ಗುರುತಿನ ಚೀಟಿ, ಪಡಿತರ ಚೀಟಿ ಇಲ್ಲ. ಚೀಟಿ ಮಾಡಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರು, ದಮನಿತರ ಮಹಿಳೆಯರಿಗೆ ಕಿರುಸಾಲ ಯೋಜನೆ ಮೂಲಕ ನೇರ ನಿಗಮದಿಂದ ಸಾಲ ಸೌಲಭ್ಯ ನೀಡುವ ಚಿಂತನೆ ನಡೆಸಲಾಗುತ್ತಿದೆ. ಕಿರುಸಾಲ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಕ್ಕೆ ನಿಗಮದಿಂದ ವರ್ಷಕ್ಕೆ 10 ಸಾವಿರ ರೂ.ನೀಡಲಾಗುತ್ತದೆ. ಈ ಯೋಜನೆ ಪುನರಾರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜತೆ ಚರ್ಚಿಸಲಾಗುವುದು ಎಂದರು.
ದಮನಿತ ಮಹಿಳೆಯರಿಗೆ ಚೇತನ ಯೋಜನೆಯಡಿ 1 ಲಕ್ಷ ರೂ.ವರೆಗೆ ಹಣಕಾಸಿನ ಸಹಕಾರ ನೀಡುತ್ತಿದ್ದೇವೆ. ಉದ್ಯೋಗಿನಿ ಯೋಜನೆಯಡಿ ಕೋಲಾರದ ಜಯನಗರದಲ್ಲಿ 3 ಲಕ್ಷ ರೂ. ಸಾಲ ನೀಡಿದ್ದು, ಬಹಳ ಅಚ್ಚುಕಟ್ಟಾಗಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. 3 ಲಕ್ಷ ಸಾಲದಲ್ಲಿ ೯೦ ಸಾವಿರ ಸಬ್ಸಿಡಿ ಸಿಗುತ್ತದೆ. ಇನ್ನುಳಿದ ಹಣವನ್ನು ಬಡ್ಡಿ ಇಲ್ಲದೆ ವಾಪಸ್ ನೀಡುವ ವ್ಯವಸ್ಥೆ ಈ ಯೋಜನೆಯಡಿ ಇದೆ ಎಂದು ಮಾಹಿತಿ ನೀಡಿದರು.
ದಮನಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ. ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಒಟ್ಟು ಮೂರು ಸಾವಿರ ಮನೆಗಳನ್ನು ವಿತರಿಸಲು ಪ್ರಕ್ರಿಯೆ ನಡೆಯುತ್ತಿದೆ. ನಿಗಮಕ್ಕೆ ಸಿಕ್ಕಿರುವ ಅಲ್ಪ ಅನುದಾನ ಬಳಸಿಕೊಂಡು ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಯೋಜನೆ ತಲುಪಿಸುತ್ತಿದ್ದೇವೆ ಎಂದರು.
ಕೋಲಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಇದ್ದರು.

  • ಸಮೀಕ್ಷೆ ನಡೆಸಲು ನಿರ್ಧಾರ
    ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆಗ ಹೆಚ್ಚು ಸೌಲಭ್ಯ ಕಲ್ಪಿಸಲು ಸಹಾಯವಾಗುತ್ತದೆ. ಮೈಸೂರು ಹಾಗೂ ವಿಜಯಪುರದಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸಿದ್ದು ಯಶಸ್ವಿಯಾಗಿದೆ. ಕಳೆದ ಬಜೆಟ್‌ನಲ್ಲಿ ನಿಗಮಕ್ಕೆ 95 ಕೋಟಿ ರೂ. ಅನುದಾನ ಇಟ್ಟಿದ್ದಾರೆ. 5 ಕೋಟಿ ರೂ. ಸಿಬ್ಬಂದಿ ವೇತನಕ್ಕೆ ಹೋಗುತ್ತದೆ. ಹೀಗಾಗಿ, ಹೆಚ್ಚಿನ ಅನುದಾನ ಲಭಿಸಿದರೆ ಸೌಲಭ್ಯ ಮತ್ತಷ್ಟು ವಿಸ್ತರಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರು ಬಹಳ ಸಂಕಷ್ಷದಲ್ಲಿದ್ದಾರೆ ಎಂದು ಪದ್ಮಾ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net