

ಶಿವಮೊಗ್ಗ: ಅಡಕೆ ಹಾಳೆಯ ಉತ್ಪನ್ನಗಳಿಗೆ ಬಿಐಎಸ್ (ಭಾರತೀಯ ಮಾನಕ ಬ್ಯೂರೋ) ಪ್ರಮಾಣೀಕರಣ ದೊರೆತರೆ ಉತ್ತಮ ಮಾರುಕಟ್ಟೆ, ಆದಾಯದೊಂದಿಗೆ ಮೌಲ್ಯವೂ ಹೆಚ್ಚುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಡಕೆ ಹಾಳೆ ಉತ್ಪನ್ನಗಳ ಪ್ರಮಾಣೀಕರಣದ ಮಹತ್ವ ಕುರಿತು ಸಂವಾದ ಉದ್ಘಾಟಿಸಿ ಮಾತನಾಡಿ, ಭಾರತ ಈಗ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಜಾಗತೀಕರಣ ನೀತಿಯಿಂದ ದೇಶದಲ್ಲಿ ಚಿತ್ರಣ ಬದಲಾಗುತ್ತಿದೆ. ಹೊಸ ಸ್ಟಾರ್ಟಪ್‌ಗಳು ನವೀನ ಉತ್ಪನ್ನಗಳನ್ನು ಶುರು ಮಾಡುತ್ತಿವೆ. ಇವುಗಳಿಗೆ ಬಿಐಎಸ್ ಪ್ರಮಾಣೀಕರಣ ನೀಡುವ ಕೆಲಸವಾಗುತ್ತಿದೆ. ಸುಮಾರು 45 ಸಾವಿರ ಉತ್ಪನ್ನಗಳಿಗೆ ಬಿಐಎಸ್ ಅಧಿಕೃತ ಪರಿವಾನಗಿ ದೊರೆತಿದೆ ಎಂದರು.
ಅಡಕೆ ಹಾಳೆಯಿಂದ ತಯಾರಾಗುವ ಪ್ಲೇಟ್ ಮತ್ತಿತರ ಉತ್ಪನ್ನಗಳನ್ನು ನಾವು ಯಾವುದೇ ಮಾನದಂಡ, ಪ್ರಮಾಣೀಕರಣವಿಲ್ಲದೆ ಮಾಡುತ್ತಿದ್ದೇವೆ. ಇಂತಹ ಬೇಡಿಕೆಯ ಉತ್ಪನ್ನಕ್ಕೆ ಬಿಐಎಸ್ ಪ್ರಮಾಣೀಕರಣ ದೊರೆತರೆ ಉತ್ಪನ್ನದ ಮೌಲ್ಯವರ್ಧನೆಯಾಗಿ ಆದಾಯವೂ ಹೆಚ್ಚುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ ಮಾತನಾಡಿ, ನಮ್ಮ ಜಿಲ್ಲೆ ಅಡಕೆ ಹಬ್ ಎನಿಸಿದೆ. ನಮ್ಮ ಅಡಕೆ ಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕಣ ದೊರೆತರೆ ರೈತರು, ವ್ಯಾಪಾರಸ್ಥರು, ಕಾರ್ಮಿಕರು ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
ಹಲವಾರು ರೈತರು ಮನೆಯಲ್ಲೇ ಅಡಕೆ ಹಾಳೆಗಳಲ್ಲಿ ಪ್ಲೇಟ್ ಮತ್ತಿತರ ಉತ್ಪನ್ನಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ. ನಾವು ಗುಣಮಟ್ಟದ ಪ್ರಜ್ಞೆಯನ್ನು ಬೆಳೆಸಿಕೊಂಡಲ್ಲಿ ಉತ್ತಮ ಆದಾಯ ಪಡೆಯಬಹುದು. ವಿಶ್ವಾಸ, ನಂಬಿಕೆ ಗಳಿಸಿ ವಿಶ್ವದಲ್ಲೇ ಉತ್ತಮ ಬ್ರಾೃಂಡ್ ಆಗಬೇಕು ಎಂದು ಹೇಳಿದರು.
ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತೋರುವ ಕಾಳಜಿಯನ್ನು ಸ್ಥಳೀಯವಾಗಿ ಮಾರಾಟವಾಗುವ ಉತ್ಪನ್ನದ ಬಗ್ಗೆಯೂ ತೋರಬೇಕು. ಹಾಳೆಯಲ್ಲಿನ ಫಂಗಸ್‌ನ್ನು ತೆಗೆದು ಹಾಕಲು ಕ್ರಮ ವಹಿಸಿ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಪ್ರಯತ್ನಿಸಬೇಕು. ಗುಣಮಟ್ಟವನ್ನು ವರ್ಗೀಕರಿಸಿ ಮಾರಾಟ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅಡಕೆ ಹಾಳೆ ಉತ್ಪನ್ನಗಳ ತಯಾರಕರ ಮತ್ತು ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಮಂಜುನಾಥ, ಬಿಐಎಸ್‌ನ ವಿಜ್ಞಾನಿಗಳಾದ ಡಿ.ಪಿ.ಕುಮಾರ್, ಮರ್ಸಿರಾಣಿ, ಎಂ.ಎಂ ಜಯಸ್ವಾಮಿ, ಮಾನಕ, ಮೌಲ್ಯವರ್ಧನ ತರಬೇತುದಾರ ಎಂ.ಮಹಮದ್, ಜಿ.ವಿಜಯಕುಮಾರ್ ಇದ್ದರು.