ದೆಹಲಿಯ ನಿರ್ಬಂಧಿತ ಏರಿಯಾಗಳಲ್ಲಿ ಕರ್ತವ್ಯ ನಿರ್ವಹಿಸುವುದೇ ಕಷ್ಟವೆನ್ನುತ್ತಿದ್ದಾರೆ ಸರ್ಕಾರಿ ಅಧಿಕಾರಿಗಳು; ಅಲ್ಲಿನ ಜನರ ವಿಚಿತ್ರ ಬೇಡಿಕೆಗಳಿಂದ ಕಿರಿಕಿರಿ

Containment Zone 20 April 20
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಡೀ ದೆಹಲಿ ಕರೊನಾ ಹಾಟ್​​ಸ್ಫಾಟ್ ಆಗಿದೆ ಎಂದು ಪರಿಗಣಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಲಾಕ್​ಡೌನ್​ನಲ್ಲಿ ಏಪ್ರಿಲ್​ 20ರ ನಂತರವೂ ಯಾವುದೇ ಸಡಿಲಿಕೆ ಕೊಟ್ಟಿಲ್ಲ.

ಕಂಟೇನ್​ಮೆಂಟ್ ವಲಯಗಳು, ಕ್ವಾರಂಟೈನ್​ ಕೇಂದ್ರಗಳಲ್ಲಿ ಬಿಗಿ ಭದ್ರತೆ ಮಾಡಿ, ಪೊಲೀಸ್ ಬಂದೋಬಸ್ತ್​ ಜತೆಗೆ ಅಲ್ಲಿನ ಮೇಲ್ವಿಚಾರಣೆಗಾಗಿ ಆಯಾ ಜಿಲ್ಲಾಡಳಿತಾಧಿಕಾರಿಗಳನ್ನೂ ನಿಯೋಜಿಸಲಾಗಿದೆ.
ಆದರೆ ಅಂತಹ ಕಂಟೇನ್​​ಮೆಂಟ್​ ವಲಯದಲ್ಲಿರುವವರು, ಕ್ವಾರಂಟೈನ್​ ಸೆಂಟರ್​​ಗಳಲ್ಲಿರುವವರ ವಿಚಿತ್ರ ಬೇಡಿಕೆಗಳು ಸರ್ಕಾರಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕಂಟೇನ್​​ಮೆಂಟ್​ ವಲಯಗಳು ಎಂದು ಗುರುತಿಸಲಾಗಿರುವ ಏರಿಯಾಗಳಲ್ಲಿ ಜನರು ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದೆ. ಆಯಾ ಏರಿಯಾಗಳಲ್ಲಿ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ವಾಟ್ಸ್​ಆ್ಯಪ್​ ಗ್ರುಪ್​​​ಗಳನ್ನು ರಚಿಸಿಕೊಂಡಿದ್ದಾರೆ. ಅದರಲ್ಲಿ ಸಾರ್ವಜನಿಕರನ್ನೂ ಸೇರಿಸಿಕೊಂಡು, ಅದರ ಮೂಲಕವೇ ಜನರ ಮನವಿ ಸ್ವೀಕರಿಸುತ್ತಾರೆ. ಬೇಕಾದ ವಸ್ತುಗಳನ್ನು ಮನೆಮನೆಗೆ ನೀಡುತ್ತಿದ್ದಾರೆ.

ಆದರೆ ಈ ವಾಟ್ಸ್​ಆ್ಯಪ್​ ಗ್ರುಪ್​ನಲ್ಲಿ ಜನರು ವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದಾರೆ. ಅಧಿಕಾರಿಗಳ ಬಳಿ ಚಿಕನ್​, ಮಟನ್​, ಫಿಜ್ಜಾ, ಬಿರ್ಯಾನಿ, ಬಿಸಿಬಿಸಿ ಸಮೋಸಾಗಳನ್ನು ತಂದುಕೊಡುವಂತೆ ಕೇಳುತ್ತಿದ್ದಾರೆ. ಮತ್ತೆ ಕೆಲವರು ಸಿಹಿ ತಿಂಡಿಗಾಗಿ ಬೇಡಿಕೆ ಇಡುತ್ತಿದ್ದಾರೆ.

ಈ ಬಗ್ಗೆ ಸ್ಥಳದಲ್ಲಿ ನಿಯೋಜನೆಗೊಂಡ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಬಳಿ ಅಲವತ್ತುಕೊಂಡಿದ್ದಾರೆ. ನಾವು ಜನರ ಕ್ಷುಲ್ಲಕ ಆಸೆಗಳನ್ನೆಲ್ಲ ಈಡೇರಿಸುವುದಿಲ್ಲ. ತರಕಾರಿ, ನೀರು, ಹಾಲುಗಳಂತಹ ದಿನದ ಅಗತ್ಯ ವಸ್ತುಗಳನ್ನು ಒದಗಿಸುವುದಷ್ಟೇ ನಮ್ಮ ಕೆಲಸ. ಹಾಗಾಗಿ ಇಂತಹ ಬೇಡಿಕೆಗಳು ಬಂದರೆ ನಿರ್ಲಕ್ಷಿಸಿ ಎಂದು ಸ್ಥಳದಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ 1,893 ಮಂದಿ ಕರೊನಾ ಸೋಂಕಿತರಿದ್ದು, 43 ಮಂದಿ ಮೃತಪಟ್ಟಿದ್ದಾರೆ. ಒಟ್ಟು 76 ಏರಿಯಾಗಳನ್ನು ಕಂಟೇನ್​ಮೆಂಟ್​ ವಲಯ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net