ಕೃಷಿಯ ಸಾಂಪ್ರದಾಯಿಕ ಸೊಗಡು ನಾಶ : ಲೋಕನಾಥ ಪೂಜಾರಿ ಹೇಳಿಕೆ

gadde
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ವತಿಯಿಂದ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮದ ಪುಣ್ಕೇದಡಿ ಎಂಬಲ್ಲಿ ಹಡೀಲು ಗದ್ದೆಯಲ್ಲಿ ಭತ್ತ ಕೃಷಿ ನಾಟಿ ಮಾಡುವ ಕಾರ್ಯಕ್ರಮದ ಅಂಗವಾಗಿ ’ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ’ ವಿನೂತನ ಕಾರ್ಯಕ್ರಮ ಭಾನುವಾರ ನಡೆಯಿತು.

ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್‌ನ ಟ್ರಸ್ಟಿ ಲೋಕನಾಥ ಪೂಜಾರಿ ತಿಮರಾಜೆ ಮಾತನಾಡಿ ವ್ಯವಸಾಯ, ಕೃಷಿ ಚಟುವಟಿಕೆಗಳೇ ನಮ್ಮ ದೇಶದ ಭದ್ರ ಬೇರುಗಳು, ಕೃಷಿಯನ್ನೇ ಹಲವಾರು ಕುಟುಂಬಗಳು ಇಂದು ಜೀವನೋಪಾಯವನ್ನಾಗಿ ಅವಲಂಬಿಸಿವೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆದರೆ ವಿಜ್ಞಾನ ಬೆಳೆದಂತೆಲ್ಲ ಕೃಷಿಯ ಸಾಂಪ್ರದಾಯಿಕ ಸೊಗಡು ನಾಶಗೊಳ್ಳುತ್ತಿದೆ. ಇದರಿಂದ ಹಿರಿಯರ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪದ್ಧತಿಗಳು ನಾಶವಾಗುತ್ತಿರುವುದು ಬೇಸರದ ಸಂಗತಿ ಎಂದರು.

ಗದ್ದೆಯ ಮಾಲೀಕ ಶೀನಪ್ಪ ಪೂಜಾರಿ ಕಲ್ಲಾಜೆ ಉದ್ಘಾಟಿಸಿದರು. ಹಿರಿಯರಾದ ಶಾಂತಪ್ಪ ಪೂಜಾರಿ ಪಚ್ಚಾಡಿಬೈಲ್, ಕಡೇಶಿವಾಲಯ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಮೋಹನ್ ಕುಮಾರ್ ಕಲ್ಲಾಜೆ, ಟ್ರಸ್ಟಿಗಳಾದ ಕೂಸಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಯುವವಾಹಿನಿ ಮಾಣಿ ಘಟಕದ ಮಾಜಿ ಅಧ್ಯಕ್ಷ ಹರೀಶ್ ಬಾಕಿಲ, ಜಯಂತ್ ಬರಿಮಾರ್, ಕಡೇಶಿವಾಲಯ ಗ್ರಾ.ಪಂ ಅಧ್ಯಕ್ಷೆ ಭಾರತಿ ರಾವ್, ಮಾಜಿ ಅಧ್ಯಕ್ಷ ಸುರೇಶ್ ಬನಾರಿ, ಯುವಶಕ್ತಿ ಕಡೇಶಿವಾಲಯ ಅಧ್ಯಕ್ಷ ದೇವಿಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಮೊದಲಾದವರು ಶುಭ ಹಾರೈಸಿದರು.

ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದ ಬಳಿಕ ಎಲ್ಲರೂ ಗದ್ದೆಯಲ್ಲಿ ಕೃಷಿ ನಾಟಿ ಮಾಡಿದರು. ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ವಿದ್ಯಾಧರ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಯಶವಂತ್ ಪತ್ತುಕೊಡಂಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net