ಬಂಟ್ವಾಳ: ಐತಿಹಾಸಿಕ ಹಿನ್ನೆಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಅವರಣಗೋಡೆ ಕುಸಿದು ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ವ್ಯವಸ್ಥಾಪನಾ ಸಮಿತಿಯ ವಿನಂತಿಯ ಮೇರೆಗೆ ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ಕುಸಿದ ಆವರಣ ಗೋಡೆಯನ್ನು ಪುನರ್ ನಿರ್ಮಿಸುತ್ತಿದ್ದಾರೆ. ಕೆಳಭಾಗದಲ್ಲಿರುವ ಶ್ರೀ ಪಾರ್ವತಿ ಸನ್ನಿಧಿ ಬಳಿಯಿಂದ ಗ್ರಾಮಸ್ಥರು ಸಾಮಗ್ರಿಗಳನ್ನು ತಲೆಯಲ್ಲಿ ಹೊತ್ತುತಂದು ಕಾಮಗಾರಿ ನಡೆಸಲಾಗುತ್ತಿದೆ.
ಶ್ರೀ ಕಾರಿಂಜೇಶ್ವರ ದೇವಸ್ಥಾನದ ಹೊರಾಂಗಣದ ಎಡ ಪಾರ್ಶ್ವದ ಬದಿಗೆ ನಿರ್ಮಿಸಲಾದ ಕಲ್ಲಿನ ತಡೆಗೋಡೆ ಹಠಾತ್ ಕುಸಿದು ಬಿದ್ದಿದ್ದು, ಮರುದಿನ ಬೆಳಗ್ಗೆ ದೇವಾಲಯಕ್ಕಾಗಮಿಸಿದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಇದೇ ಸ್ಥಳದಲ್ಲಿರುವ ಅಂಗಣದಲ್ಲಿ ವಾನರಗಳಿಗೆ ನೈವೇದ್ಯ ಅನ್ನ ಬಡಿಸಲಾಗುತ್ತಿದ್ದು, ಅವರಣ ಗೋಡೆಯೊಂದಿಗೆ ಅಂಗಣದ ಇಂಟರ್‌ಲಾಕ್ ಕಿತ್ತು ಹೋಗಿದೆ. ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ.
ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಈ ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತವಾಗಿದ್ದು, ಕೆಳಭಾಗದಲ್ಲಿ ಶ್ರೀ ಪಾರ್ವತಿ ಸನ್ನಿಧಿ ಹಾಗೂ ತುತ್ತ ತುದಿಯಲ್ಲಿ ಶ್ರೀ ಕಾರಿಂಜೇಶ್ವರ ದೇವಸ್ಥಾನವಿದೆ.
ಅಕ್ರಮ ಗಣಿಗಾರಿಕೆಯಿಂದ ಸಮಸ್ಯೆ
2020 ಅಕ್ಟೋಬರ್ 13ರಂದು ಇದೇ ರೀತಿ ದೇವಾಲಯದ ಎಡ ಭಾಗದ ತಡೆಗೋಡೆ ಕುಸಿತವಾಗಿತ್ತು. ದೇವಸ್ಥಾನದ ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಈ ಕುಸಿತವಾಗಿದೆಯೆಂದು ಆರೋಪಿಸಲಾಗಿತ್ತು. ಬಳಿಕ ಭಕ್ತರ ಆಕ್ರೋಶಕ್ಕೆ ಮಣಿದ ಗಣಿ ಇಲಾಖೆ, ಸರ್ಕಾರ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ತಡೆಗೋಡೆ ಕುಸಿತವಾಗಿದೆ. ಶ್ರಮದಾನ ಮೂಲಕ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದ್ದು, ಮುಂದಕ್ಕೆ ತಜ್ಞರ ಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ತಿಳಿಸಿದ್ದಾರೆ.