ಕೋವಿಡ್​​ ವಾರ್ಡ್​ನಲ್ಲಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಣೆ

birthday -covid hospital
Published on

ರಾಮನಗರ: ಕೋವಿಡ್​ ವಾರ್ಡ್​ನಲ್ಲಿ ಮೂಲ ಸೌಕರ್ಯ ಕೊರತೆ ಕಾಡುತ್ತಿದೆ, ಕೋವಿಡ್​ ಆಸ್ಪತ್ರೆಯಲ್ಲಿ ಸೋಂಕಿತರಿಗೆ 'ನರಕ' ದರ್ಶನವಾಗುತ್ತಿದ್ದು, ಕುಡಿಯೋಕೆ ನೀರಿಲ್ಲದೆ ಕೆಲವರು ಶೌಚಗೃಹದ ನೀರನ್ನೇ ಕುಡಿದಿದ್ದಾರೆ, ಸೂಕ್ತ ಊಟ-ತಿಂಡಿಯ ವ್ಯವಸ್ಥೆಯೂ ಇರಲಿಲ್ಲ. ರೋಗದಿಂದ ಬಳಲುತ್ತಿರುವವರಿಗೆ ಹಸಿವಿನ ಶಿಕ್ಷೆ ಕಾಡಿತ್ತು, ಇಲ್ಲಿನ ಕರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಯ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ... ಇಂತಹ ಹತ್ತಾರು ಸುದ್ದಿಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿತ್ತು. ಕೆಲ ಆಸ್ಪತ್ರೆಗಳಲ್ಲಿನ ಕರ್ಮಕಾಂಡದ ಬಗ್ಗೆ ಕರೊನಾ ಸೋಂಕಿತ ರೋಗಿಗಳೇ ವಿಡಿಯೋ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಈ ನಡುವೆ ಕೋವಿಡ್ ಆಸ್ಪತ್ರೆಯಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಂತಿದೆ ರಾಮನಗರ ಜಿಲ್ಲಾಸ್ಪತ್ರೆ. ಆರೋಗ್ಯ ಇಲಾಖೆಯು ಸೋಂಕಿತರೊಬ್ಬರ ಹುಟ್ಟುಹಬ್ಬವನ್ನು‌ ಕೋವಿಡ್ ವಾರ್ಡಿನಲ್ಲೇ ಆಚರಿಸುವ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಅಪರೂಪದ ಘಟನೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನರ್ಸ್ ಆಗಿರುವ ವ್ಯಕ್ತಿಯೊಬ್ಬರಿಗೆ ಕಳೆದ ವಾರ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ದಾಖಲಾಗುವ ಮುನ್ನ ಈ ನರ್ಸ್​ ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ದುಡಿದಿದ್ದರು. ನಿನ್ನೆ(ಬುಧವಾರ) ಇವರ ಜನ್ಮದಿನ. ಹಾಗಾಗಿ ಅಂದು ಸಂಜೆ ಕೋವಿಡ್​ ವಾರ್ಡ್​ಗೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ನರ್ಸ್​ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ಇನ್ನುಳಿದ ಕೋವಿಡ್ ಸೋಂಕಿತರಿಗೂ ಆತ್ಮಸ್ಥೈರ್ಯ ತುಂಬಿದ್ದಾರೆ. ಪಿಪಿಇ ಕಿಟ್ ಧರಿಸಿ ಬಂದಿದ್ದ ಡಿಎಚ್ಒ ಮತ್ತು ಇತರ ಸಿಬ್ಬಂದಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net