ಮಣಿಪುರದಲ್ಲಿ ಉಗ್ರರ ದಾಳಿ: ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮ

crpf
Published on

ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯ ಮೊಂಗ್‌ಬಂಗ್ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧ ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಓರ್ವ ಪೊಲೀಸ್ ಪೇದೆಯೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಯೋಧ ಬಿಹಾರ ಮೂಲದ ಅಜಯ್ ಕುಮಾರ್ ಝಾ (43) ಎಂದು ಗುರುತಿಸಲಾಗಿದೆ. ಯೋಧನ ತಲೆಗೆ ಗುಂಡು ಹಾರಿಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಮುಂದುವರಿದಿದೆ.

ಸಿಎಂ ಖಂಡನೆ: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ದಾಳಿಯನ್ನು ಖಂಡಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ.

ಜಿರಿಬಾಮ್ ಜಿಲ್ಲೆಯಲ್ಲಿ ಭಾನುವಾರ ಸಶಸ್ತ್ರ ಗುಂಪು ನಡೆಸಿದ ದಾಳಿ ಮತ್ತು ಸಿಆರ್‌ಪಿಎಫ್ ಜವಾನನ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಶಸ್ತ್ರ ಗುಂಪು ಕುಕಿ ಉಗ್ರಗಾಮಿಗಳೆಂದು ಶಂಕಿಸಲಾಗಿದೆ.

ಕರ್ತವ್ಯದ ಹಾದಿಯಲ್ಲಿದ್ದ ಯೋಧನ ಅತ್ಯುನ್ನತ ತ್ಯಾಗ ವ್ಯರ್ಥವಾಗುವುದಿಲ್ಲ. ಹುತಾತ್ಮ ಯೋಧನ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ಶನಿವಾರ ರಾತ್ರಿಯೂ ಗ್ರಾಮದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಭಾನುವಾರದ ದಾಳಿಯ ನಂತರ ಮೊಂಗ್‌ಬಾಂಗ್‌ನಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯ ವಾಹನಕ್ಕೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net