

ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಇದು ಆ ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಕಳಂಕವಾಗಿ ಉಳಿಯುತ್ತದೆ. ಗುಂಡು ಹಾರಿಸಿದ ದುಷ್ಕರ್ಮಿಯನ್ನು ಮ್ಯಾಥ್ಯೂ ಕ್ರೂಕ್ಸ್(20)ಎಂದು ಎಫ್‌ಬಿಐ ಗುರುತಿಸಿದೆ.
ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್‌ನ ಕ್ರೂಕ್ ರಿಪಬ್ಲಿಕನ್ ಪಕ್ಷದ ಬೆಂಬಲಿಗನಾಗಿದ್ದಾನೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದರೆ, ಆತ 2021 ರಲ್ಲಿ ಡೆಮಾಕ್ರಟಿಕ್ ಸಂಯೋಜಿತ ಪ್ರೋಗ್ರೆಸ್ಸಿವ್ ಟರ್ನ್‌ಔಟ್ ಪ್ರಾಜೆಕ್ಟ್‌ಗೆ $15 ದೇಣಿಗೆ ನೀಡಿದ್ದ ಎನ್ನಲಾಗಿದೆ. ಕ್ರೂಕ್ಸ್ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕ್ರೂಕ್ಸ್‌ಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವು ಮಾಧ್ಯಮಗಳು ಆತನನ್ನು ಶಂಕಿತ ಎಂದು ಹೇಳುವ ಮೊದಲೇ ಆತನ ಫೋಟೋಗಳನ್ನು ಪ್ರಸಾರ ಮಾಡಿವೆ. ಮತ್ತೊಂದೆಡೆ, ಗುಂಡು ಹಾರಿಸುವುದಕ್ಕೂ ಮುನ್ನ ಆತ ರೆಕಾರ್ಡ್ ಮಾಡಿದ್ದಾನೆ ಎಂದು ಹೇಳುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ‘ಐ ಹೇಟ್ ದಿ ರಿಪಬ್ಲಿಕನ್ ಪಾರ್ಟಿ ಮತ್ತು ಟ್ರಂಪ್’ ಎಂದು ಹೇಳುತ್ತಿರುವಂತಿದೆ.
ಟ್ರಂಪ್ ಭಾಷಣಕ್ಕೆ ಸಜ್ಜುಗೊಳಿಸಲಾಗಿದ್ದ ವೇದಿಕೆಯಿಂದ 130 ಮೀಟರ್ ದೂರದಿಂದ ದಾಳಿ ನಡೆದಿದೆ ಎನ್ನಲಾಗಿದೆ. ಸಮಾವೇಷದ ಛಾವಣಿಯ ಮೇಲಿಂದ ಗುಂಡುಹಾರಿಸಿರುವುದು ಸ್ಪಷ್ಟವಾಗಿದೆ. ತಕ್ಷಣ ಎಚ್ಚೆತ್ತ ಗುಪ್ತದಳದ ಅಧಿಕಾರಿಗಳು ಆತನನ್ನು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಕ್ರೂಕ್ಸ್ 2022 ರಲ್ಲಿ ಬೆತೆಲ್ ಪಾರ್ಕ್ ಹೈಸ್ಕೂಲ್‌ನಿಂದ ಪದವಿ ಪಡೆದಿದ್ದು, ರಾಷ್ಟ್ರೀಯ ಗಣಿತ ಮತ್ತು ವಿಜ್ಞಾನ ಉಪಕ್ರಮದಿಂದ 500 ಡಾಲರ್ 'ಸ್ಟಾರ್' ಪ್ರಶಸ್ತಿಯನ್ನು ಸಹ ಪಡೆದಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಎಬಿಬಿಐ ಪ್ರಕಟಿಸಿದೆ.‘