

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಶಾಂತಿನಗರದಲ್ಲಿ ನಾಟಿ ಕೋಳಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಹಕ್ಕಿ ಜ್ವರದ ಶಂಕೆ ಹಿನ್ನೆಲೆಯಲ್ಲಿ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಶಾಂತಿನಗರದ ನೂರ್‌ಜಾನ್ ಮನೆಯ ಬಳಿ ೭ ನಾಟಿ ಕೋಳಿಗಳನ್ನು ಸಾಕಿದ್ದರು. ಈ ಪೈಕಿ ಇತ್ತೀಚೆಗೆ ನಾಯಿಗಳಿಗೆ ಎರಡು ಬಲಿಯಾಗಿವೆ. ಇದರ ನಡುವೆ ಇನ್ನು ಎರಡು ಕೋಳಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಸ್ಥಳಿಯರು ಆತಂಕದಲ್ಲಿ ಪಶು ವೈದ್ಯ ಮತ್ತು ಪಶುಪಾಲನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಂಜಾಗ್ರತಾ ಕ್ರಮವಾಗಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಧಿಕ ತಾಪಮಾನ ಇದ್ದು ಇದಕ್ಕೆ ಚಿಕ್ಕ ಕೋಳಿ ಮರಿಗಳು ಮೃತಪಟ್ಟಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪಶು ವೈದ್ಯರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ವರದಹಳ್ಳಿಯಲ್ಲಿ 38 ನಾಟಿ ಕೋಳಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದವು. ಇದಕ್ಕೆ ಸೋಂಕು ಹರಡಿದ ಗ್ರಾಮದ ಸುತ್ತಲಿನ 1 ಕಿ.ಮೀ ವರೆಗಿನ ನಾಟಿ ಕೋಳಿಗಳನ್ನು ಸಾಯಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿತ್ತು.