

ಬೆಂಗಳೂರು: ಅಮೆಜಾನ್ ಕಂಪನಿಗೆ ಆನ್‌ಲೈನ್‌ನಲ್ಲಿ ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ಪತ್ತೆಹಚ್ಚಿರುವ ಯಶವಂತಪುರ ಪೊಲೀಸರು ಇಂಜಿನಿಯರ್ ವಿದ್ಯಾರ್ಥಿಯನ್ನು ಬಂಧಿಸಿ 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದ ಚಿರಾಗ್ ಗುಪ್ತಾ (22) ಬಂಧಿತ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 30 ಲಕ್ಷ ರೂ. ಜಪ್ತಿ, ಅಮೆಜಾನ್ ಡೇಟಾ ಆಧರಿಸಿ 20.34 ಕೋಟಿ ರೂ. ಮೌಲ್ಯದ 16 ಆ್ಯಪನ್ ಐಫೋನ್, ಮ್ಯಾಕ್‌ಬುಕ್, ಕಂಪ್ಯೂಟರ್ ಡೆಸ್ಕ್‌ಟಾಪ್, ಗೇಮಿಂಗ್ ಲ್ಯಾಪ್‌ಟಾಪ್, ಏರ್‌ಪಾಡ್ಸ್ ಮತ್ತು 2.5 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಮೂಲದ ಚಿರಾಗ್ ಗುಪ್ತಾ, ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದು, ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿದ್ದಾನೆ. ಜಾಲತಾಣದಲ್ಲಿ ಪರಿಚಯವಾದ ಹ್ಯಾಕರ್ಸ್, ಕಮಿಷನ್ ಆಮಿಷವೊಡ್ಡಿ ಚಿರಾಗ್‌ಗೆ ಟಾಸ್ಕ್ ಕೊಡುತ್ತಿದ್ದ.
ಅದರಂತೆ ಅಮೆಜಾನ್‌ನಲ್ಲಿ ದುಬಾರಿ ಬೆಲೆಯ ಐಫೋನ್ ಗಳನ್ನು ವಿದ್ಯಾರ್ಥಿ ಬುಕ್ ಮಾಡುತ್ತಿದ್ದ. ವಸ್ತುಗಳು ಕೈ ಸೇರಿದ ಮೇಲೆ ಹ್ಯಾಕರ್ಸ್ ಸೂಚನೆಯಂತೆ ವಿದ್ಯಾರ್ಥಿ ಆನ್‌ಲೈನ್‌ನಲ್ಲಿ ಐಫೋನ್ ವಾಪಸ್ ಮಾಡುತ್ತಿದ್ದ. ಅಮೆಜಾನ್ ಸರ್ವರ್‌ನಲ್ಲಿ ಹ್ಯಾಕರ್ಸ್, ಹ್ಯಾಕ್ ಮಾಡಿ ಗ್ರಾಹಕನಿಂದ ಮೊಬೈಲ್ ರಿಟರ್ನ್ ಆಗಿರುವಂತೆ ಅಪ್‌ಡೇಟ್ ಮಾಡುತ್ತಿದ್ದ.
ಆ ಮೊಬೈಲ್ ಗ್ರಾಹಕನ ಬಳಿಯೇ ಇರುತ್ತಿತ್ತು.ಆದರೂಗ್ರಾಹಕನ ಬ್ಯಾಂಕ್ ಖಾತೆಗೆ ಅಮೆಜಾನ್‌ನಿಂದ ಅಷ್ಟು ಹಣ ವಾಪಸ್ ಆಗುತ್ತಿತ್ತು. ಇದೇ ರೀತಿಯಲ್ಲಿ ಹ್ಯಾಕರ್ಸ್, ಇಂಜಿನಿಯರ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅಮೆಜಾನ್ ಕಂಪನಿಗೆ ಕೋಟ್ಯಂತರ ರೂ. ವಂಚನೆ ಮಾಡುತ್ತಿದ್ದ.
ಮತ್ತೊಂದೆಡೆ ಅಮೆಜಾನ್ ಕಂಪನಿಗೆ ಗ್ರಾಹಕರ ಕಡೆಯಿಂದ ನಷ್ಟ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಗಂಭೀರವಾಗಿ ಪರಿಗಣಿಸಿ ಆಂತರಿಕ ತನಿಖೆ ಶುರು ಮಾಡಿದಾಗ ಮೇ 15ರಂದು ವಿವಿಧ ದಿನಾಂಕದಲ್ಲಿ ಗ್ರಾಹಕನೊಬ್ಬ 4 ಆ್ಯಪಲ್ ಐಫೋನ್ ಗಳನ್ನು ಒಂದೇ ವಿಳಾಸಕ್ಕೆ ತರಿಸಿಕೊಂಡಿದ್ದ. ಕೆಲವೇ ನಿಮಿಷದಲ್ಲಿ ಮತ್ತೆ ಕಂಪನಿಗೆ ಹಿಂತಿರುಗಿಸಿದ್ದ. ಅಪ್ಲಿಕೇಷನ್‌ನಲ್ಲಿ ವಾಪಸ್ ಬಂದಿರುವ ರೀತಿಯಲ್ಲಿ ಅಪ್‌ಡೇಟ್ ಆಗಿದ್ದು, ಆತನ ಬ್ಯಾಂಕ್ ಖಾತೆ ಹಣ ಜಮೆ ಆಗಿರುತ್ತದೆ.
ಆದರೆ, ಐಫೋನ್ ಮಾತ್ರ ವಾಪಸ್ ಬಂದಿರುವುದಿಲ್ಲ. ಅನುಮಾನ ಬಂದು ಅಮೆಜಾನ್ ಅಧಿಕಾರಿಗಳು ಗ್ರಾಹಕನ ವಿಳಾಸಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ವಂಚನೆ ಆಗಿರುವುದು ಖಚಿತವಾಗಿತ್ತು. ಈ ಬಗ್ಗೆ ಯಶವಂತಪುರ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.