ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆ; ಕೇಜ್ರಿವಾಲ್ ಉದಾಹರಣೆ ಕೊಟ್ಟು ಮಸೂದೆ ಸಮರ್ಥಿಸಿದ ಅಮಿತ್ ಶಾ| Amit Shah

Amit Shah
Published on

Amit Shah: ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಪಿಎಂ, ಸಿಎಂ ಹಾಗೂ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಮಂಡಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಉದಾಹರಣೆ ಕೊಟ್ಟು ತಮ್ಮ ಮಸೂದೆಯನ್ನು ಶುಕ್ರವಾರ(ಆಗಸ್ಟ್​ 22) ಸಮರ್ಥಿಸಿಕೊಂಡಿದ್ದಾರೆ.

ಗಂಭೀರ ಕ್ರಿಮಿನಲ್ ಆರೋಪದ ಮೇಲೆ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಪ್ರಧಾನಿ, ಸಿಎಂ, ಕೇಂದ್ರ ಸಚಿವರು ಹಾಗೂ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆಯನ್ನು ಅಮಿತ್ ಶಾ  ಬುಧವಾರ ಸಂಸತ್ತಿನಲ್ಲಿ ಮಂಡಿಸಿದ್ದರು.

ಕೇರಳದ ಮನೋರಮಾ ಚಾನಲ್​ನ ಕಾನ್​ಕ್ಲೇವ್​ನಲ್ಲಿ ಭಾಗವಹಿಸಿ ಮಾತನಾಡಿದ ಶಾ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಂತಹ ಕಾನೂನು ತಂದಿಲ್ಲ. ಅಬಕಾರಿ ಹಗರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಿಂದ ಸರ್ಕಾರವನ್ನು ನಡೆಸುತ್ತಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್​ರನ್ನು ಉದಾಹರಣೆಯಾಗಿ ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಜನರು ಯಾವುದೇ ಸಿಎಂ ಜೈಲಿನಲ್ಲಿಯೇ ಇದ್ದು ಸರ್ಕಾರ ನಡೆಸಬೇಕೆಂದು ಬಯಸುತ್ತಾರೆಯೇ? ಇದು ಯಾವ ರೀತಿಯ ಚರ್ಚೆ? ನನಗೆ ಅರ್ಥವಾಗುತ್ತಿಲ್ಲ. ಇದು ನೈತಿಕತೆಯ ಪ್ರಶ್ನೆ. ಪ್ರತಿಪಕ್ಷಗಳ ನಾಯಕರು ಇದನ್ನು ಮೊದಲು ಸಂವಿಧಾನದಲ್ಲಿ ಯಾಕೆ ಸೇರಿಸಲಿಲ್ಲ ಎಂದು ಕೇಳುತ್ತಿದ್ದಾರೆ. ಸಂವಿಧಾನವನ್ನು ರಚಿಸಿದಾಗ, ಜೈಲಿಗೆ ಹೋದವರು ಚುನಾಯಿತ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ"ಎಂದು ಹೇಳಿದರು.

ಈ ವರ್ಷ ದೇಶದದಲ್ಲಿ ಮುಖ್ಯಮಂತ್ರಿಯೊಬ್ಬರು ಜೈಲಿನಿಂದ ಸರ್ಕಾರವನ್ನು ನಡೆಸಿದ ಘಟನೆ ನಡೆದಿದೆ. ಹಾಗಾದರೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇ ಅಥವಾ ಬೇಡವೇ? ಬಿಜೆಪಿ ಸರ್ಕಾರವೂ ಅಧಿಕಾರದಲ್ಲಿತ್ತು, ಆದರೆ ನಾವು ಅಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಲಿಲ್ಲ. ಕೇಜ್ರಿವಾಲ್ ಬಂಧನದ ನಂತರ ರಾಜೀನಾಮೆ ನೀಡಿದ್ದರೆ ಈ ಹೊಸ ಮಸೂದೆಯನ್ನು ಮಂಡಿಸುತ್ತಿರಲಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ನೈತಿಕತೆಯ ಮಟ್ಟವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಎರಡೂ ಪಕ್ಷಗಳ ಮೇಲಿದೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net