

ChatGPT: ಈ ವರ್ಷದ ಅಂತ್ಯದಲ್ಲಿ ಚಾಟ್ಜಿಪಿಟಿಯ ಪೋಷಕ ಕಂಪನಿಯಾದ ಓಪನ್ ಎಐ ದೆಹಲಿಯಲ್ಲಿ ತನ್ನ ಮೊದಲ ಕಾರ್ಪೋರೇಟ್ ಕಚೇರಿಯನ್ನು ತೆರೆಯಲಿದೆ. ಜೊತೆಗೆ ತನ್ನ ಸ್ಥಳೀಯ ತಂಡವನ್ನು ವಿಸ್ತರಿಸಲು ನೇಮಕಾತಿಯನ್ನು ಆರಂಭಿಸಿದೆ ಎಂದು ಶುಕ್ರವಾರ (ಆಗಸ್ಟ್ 22) ಹೇಳಿಕೆ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡರುವ ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ಮನ್, "ಭಾರತದಲ್ಲಿ ನಮ್ಮ ಮೊದಲ ಕಚೇರಿಯನ್ನು ತೆರೆಯುವುದು. ಮತ್ತು ಸ್ಥಳೀಯ ತಂಡವನ್ನು ನೇಮಿಸುವುದು. ದೇಶಾದ್ಯಂತ ಸುಧಾರಿತ ಎಐಗೆ ಹೆಚ್ಚು ಪ್ರವೇಶವನ್ನು ಕಲ್ಪಿಸುವ ಮತ್ತು ಭಾರತಕ್ಕಾಗಿ ಮತ್ತು ಭಾರತದೊಂದಿಗೆ ಎಐ ನಿರ್ಮಾಣ ಮಾಡುವ ನಮ್ಮ ಬದ್ಧತೆಯಲ್ಲಿ ಮೊದಲ ಪ್ರಮುಖ ಹೆಜ್ಜೆಯಾಗಿದೆ" ಎಂದು ತಿಳಿಸಿದ್ದಾರೆ.
"ಭಾರತದಲ್ಲಿ ಎಐಗೆ ಇರುವ ಉತ್ಸಾಹ ಮತ್ತು ಅವಕಾಶದ ಮಟ್ಟ ಅದ್ಭುತವಾಗಿದೆ. ಭಾರತವು ಜಾಗತಿಕ AI ನಾಯಕನಾಗಲು ಎಲ್ಲಾ ಅಂಶಗಳನ್ನು ಹೊಂದಿದೆ. ಅದ್ಭುತ ತಾಂತ್ರಿಕ ಪ್ರತಿಭೆ, ವಿಶ್ವ ದರ್ಜೆಯ ಡೆವಲಪರ್ ಪರಿಸರ ವ್ಯವಸ್ಥೆ, ಮತ್ತು ಇಂಡಿಯಾಎಐ ಮಿಷನ್ ಮೂಲಕ ಬಲವಾದ ಸರ್ಕಾರಿ ಬೆಂಬಲವಿದೆ" ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐ ಭಾರತದಲ್ಲಿ ಕೇವಲ ಒಬ್ಬ ಉದ್ಯೋಗಿಯನ್ನು ಹೊಂದಿದೆ. ಪ್ರಜ್ಞಾ ಮಿಶ್ರಾ ಎನ್ನುವವರು ಕಳೆದ ವರ್ಷದಿಂದ ಕಂಪನಿಗೆ ಸೇರಿಕೊಂಡಿದ್ದು, ಸಾರ್ವಜನಿಕ ನೀತಿ ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸುತ್ತಿದ್ದಾರೆ.
ಓಪನ್ ಎಐ ಭಾರತ ಪ್ರವೇಶಿಸಲು ಕಾರಣ ಏನು?
ಭಾರತವು ಚಾಟ್ಜಿಪಿಟಿಯ ಬಳಕೆದಾರರ ಸಂಖ್ಯೆಯಲ್ಲಿ ಅಮೆರಿಕಾ ನಂತರ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈ ವಾರ ಕಂಪನಿಯು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರದ ಸುಮಾರು ಒಂದು ಬಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು $4.60 ರಲ್ಲಿ ಹೆಚ್ಚು ಕೈಗೆಟಕುವ ಮಾಸಿಕ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಜೊತೆಗೆ ಇದು ಒಂದು ಮೂಲಭೂತ ಉಚಿತ ಯೋಜನೆ ಮತ್ತು ಇತರ ಪ್ರೀಮಿಯಂ ಪಾವತಿಸಿದ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.
ಭಾರತವು ಚಾಟ್ಜಿಪಿಟಿಯಲ್ಲಿ ಅತಿದೊಡ್ಡ ವಿದ್ಯಾರ್ಥಿ ಬಳಕೆದಾರರ ಜನಸಂಖ್ಯೆಯನ್ನು ಹೊಂದಿದೆ. ಮತ್ತು ಇಲ್ಲಿ ಸಾಪ್ತಾಹಿಕ ಸಕ್ರಿಯ ಬಳಕೆದಾರರು, ಕಳೆದ ಒಂದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದಾರೆ ಎಂದು ಓಪನ್ಎಐನ ಶುಕ್ರವಾರ ಬಿಡುಗಡೆ ಮಾಡಿದ ಹೊಸ ಮಾರುಕಟ್ಟೆ ಡೇಟಾದಿಂದ ತಿಳಿದುಬಂದಿದೆ. ಭಾರತದಲ್ಲಿ ಚಾಟ್ಜಿಪಿಟಿಯ ಸಾಪ್ತಾಹಿಕ ಸಕ್ರಿಯ ಬಳಕೆದಾರರು ಕೇವಲ ಕಳೆದ ಒಂದು ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದಾರೆ. (ಏಜೆನ್ಸೀಸ್)