ಸಿಎಂ,ಪಿಎಂ ಪದಚ್ಯುತಿಗೊಳಿಸುವ ಹೊಸ ಮಸೂದೆ: ಜೆಪಿಸಿಗೆ ಟಿಎಂಸಿಯ ಸದಸ್ಯರನ್ನು ನಾಮನಿರ್ದೇಶನ ಮಾಡುವುದಿಲ್ಲ ಎಂದ ಬಂಗಾಳ ಸಿಎಂ|Mamata Banerjee

Bengal CM MAMATHA
Published on

Mamata Banerjee: ಪಿಎಂ, ಸಿಎಂಗಳನ್ನು ಪದಚ್ಯುತಗೊಳಿಸುವ ಮಸೂದೆಗಳನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ)ಗೆ ತೃಣಮೂಲ ಕಾಂಗ್ರೆಸ್​ನ (ಟಿಎಂಸಿ) ಯಾವುದೇ ಸದಸ್ಯರನ್ನು ನಾಮನಿರ್ದೇಶನ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ (ಆಗಸ್ಟ್​,23) ತಿಳಿಸಿದ್ದಾರೆ.

ಈ ಮಸೂದೆಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಬಂಗಾಳ ಸಿಎಂ ಬ್ಯಾನರ್ಜಿ, ಈ ಮಸೂದೆಗಳು ದೇಶದ ಪ್ರಜಾಪ್ರಭುತ್ವ ಯುಗವನ್ನು ಅಂತ್ಯಗೊಳಿಸುತ್ತವೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೊನೆಗೊಳಿಸುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಮಸೂದೆಗಳು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಹೆಚ್ಚಿನ ಅಧಿಕಾರ ನೀಡುತ್ತವೆ ಎಂದು ತಿಳಿಸಿದ್ದಾರೆ.

ಭಾರತ ಸರ್ಕಾರ ಮಂಡಿಸಲು ಪ್ರಸ್ತಾಪಿಸಿರುವ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ನಾನು ಖಂಡಿಸುತ್ತೇನೆ. ಇದು 1975ರ ತುರ್ತು ಪರಿಸ್ಥಿತಿಗಿಂತ ಹೆಚ್ಚಿನದಾಗಿದೆ. ಭಾರತದ ಪ್ರಜಾಪ್ರಭುತ್ವ ಯುಗವನ್ನು ಶಾಶ್ವತವಾಗಿ ಕೊನೆಗೊಳಿಸುವ ಹೆಜ್ಜೆಯಾಗಿದೆ ಎಂದು ಕಿಡಿಕಾರಿದ್ದಾರೆ. ಈ ಕಠಿಣ ಹೆಜ್ಜೆ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಮರಣದಂಡನೆಯಾಗಿದೆ ಕೇಂದ್ರದ ವಿರುದ್ಧ ಬಂಗಾಳ ಸಿಎಂ ಗುಡುಗಿದ್ದಾರೆ.

ಪ್ರಧಾನಿ, ಸಿಎಂ, ಸಚಿವರನ್ನು ವಜಾಗೊಳಿಸುವ ಮಸೂದೆಯಲ್ಲಿ ಏನಿದೆ..?

ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮೂರು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಿದರು. ಸಂವಿಧಾನ 130ನೇ ತಿದ್ದುಪಡಿ ಮಸೂದೆಯು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ ಮಸೂದೆ ಮಂಡಿಸಿದ್ದರು.

ಕೇಂದ್ರ ಹೊಸ ಮೂರು ಮಸೂದೆಗಳ ಮಂಡನೆಯು ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು ಮತ್ತು ಈ ಮಸೂದೆಗಳ ಮೂಲಕ ಬಿಜೆಪಿ ಆಡಳಿತವಿಲ್ಲದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.ಅಲ್ಲದೆ, ಕೆಲವು ವಿರೋಧ ಪಕ್ಷದ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು, ಶಾ ಅವರತ್ತ ಎಸೆದರು. ನಂತರ ಮಸೂದೆಗಳನ್ನು ಜೆಪಿಸಿಗೆ ಕಳುಹಿಸಲಾಗುವುದು ಎಂದು ಶಾ ಸ್ಪಷ್ಟಪಡಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net