ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ: ಇಂಡಿಯಾ ಕೂಟದ ಆಭ್ಯರ್ಥಿ ಸುದರ್ಶನ್ ರೆಡ್ಡಿ|Sudarshan Reddy

Sudarshan Reddy
Published on

Sudarshan Reddy: ದೇಶದಲ್ಲಿ ಪ್ರಜಾಪ್ರಭುತ್ವದ ಕೊರತೆ ಇದೆ ಮತ್ತು ಕೇಂದ್ರ ಸರ್ಕಾರದಿಂದ ಸಂವಿಧಾನವನ್ನು ರಕ್ಷಿಸಬೇಕು ಎಂದು ವಿರೊಧ ಪಕ್ಷದ ಉಪರಾಷ್ಟ್ರಪತಿ ಆಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಹೇಳಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ನ್ಯಾಯಮೂರ್ತಿ, ಹಿಂದೆ ಆರ್ಥಿಕ ಕೊರತೆಯ ಬಗ್ಗೆ ಮಾತನಾಡಲಾಗುತ್ತಿತ್ತು. ಆದರೆ ಈಗ ಪ್ರಜಾಪ್ರಭುತ್ವದಲ್ಲಿ ಕೊರತೆ ಇದೆ ಮತ್ತು ಸಂವಿಧಾನವು ದಾಳಿಗೆ ಒಳಗಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೆ, ಪ್ರಜಾಪ್ರಭುತ್ವ ಎಂದರೆ ವ್ಯಕ್ತಿಗಳ ನಡುವಿನ ಘರ್ಷಣೆಗಿಂತ ವಿಚಾರಗಳ ನಡುವಿನ ಘರ್ಷಣೆಗಳೇ ಹೆಚ್ಚು ಎಂದು ಹೇಳಿದ್ದಾರೆ.ಆದರೆ, ಸರ್ಕಾರ ಮತ್ತು ವಿರೋಧ ಪಕ್ಷದ ನಡುವಿನ ಸಂಬಂಧಗಳು ಉತ್ತಮವಾಗಿರಬೇಕೆಂದು ರೆಡ್ಡಿ ತಿಳಿಸಿದರು. ಸಂವಿಧಾನವನ್ನು ಎತ್ತಿಹಿಡಿಯುವ ನನ್ನ ಪ್ರಯಾಣ ಮುಂದುವರಿಯುತ್ತದೆ. ಅಂತಿಮವಾಗಿ ಅವಕಾಶ ಸಿಕ್ಕರೆ ಸಂವಿಧಾನವನ್ನು ರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳುವಲ್ಲಿ ಕೊನೆಗೊಳ್ಳುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.

ಸಲ್ವಾ ಜುಡುಮ್ ತೀರ್ಪಿನ ಕುರಿತು ಅಮಿತ್ ಶಾ ಆರೋಪಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ (ನಿವೃತ್ತ) ರೆಡ್ಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕನ ಜೀವ, ಸ್ವಾತಂತ್ರ್ಯ ಮತ್ತು ಆಸ್ತಿಯನ್ನು ರಕ್ಷಿಸುವುದು ಸಾಂವಿಧಾನಿಕ ಕರ್ತವ್ಯವಾಗಿದೆ.

ಭಾರತದ ಗೌರವಾನ್ವಿತ ಗೃಹ ಸಚಿವರೊಂದಿಗೆ ನಾನು ನೇರವಾಗಿ ಈ ವಿಷಯವನ್ನುಚರ್ಚಿಸಲು ಬಯಸುವುದಿಲ್ಲ. ಎರಡನೆಯದಾಗಿ, ನಾನು ತೀರ್ಪನ್ನು ಬರೆದಿದ್ದೇನೆ. ತೀರ್ಪು ನನ್ನದಲ್ಲ, ತೀರ್ಪು ಸುಪ್ರೀಂ ಕೋರ್ಟ್‌ನದು ಎಂದು ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ರೆಡ್ಡಿ, ಅಮಿತ್ ಶಾ 40 ಪುಟಗಳವರೆಗಿನ ತೀರ್ಪನ್ನು ಓದಬೇಕೆಂದು ನಾನು ಬಯಸುತ್ತೇನೆ. ಶಾ ತೀರ್ಪನ್ನು ಓದಿದ್ದರೆ, ಬಹುಶಃ ಈ ಹೇಳಿಕೆಯನ್ನು ನೀಡುತ್ತಿರಲಿಲ್ಲ. ಅಲ್ಲದೆ, ಚರ್ಚೆಯಲ್ಲಿ ಸಭ್ಯತೆ ಇರಬೇಕು ಎಂದು ಶಾ ಗೆ ಪರೋಕ್ಷವಾಗಿ ರೆಡ್ಡಿ ಕುಟುಕಿದ್ದಾರೆ.

ಅಮಿತ್​ ಶಾ ಹೇಳಿದ್ದೇನು..?

ಸಾಲ್ವಾ ಜುಡುಮ್‌ನಲ್ಲಿ ರೆಡ್ಡಿ ಅವರ ತೀರ್ಪು ಎಡಪಂಥೀಯ ಉಗ್ರವಾದವನ್ನು ಬಲಪಡಿಸಿದೆ ಎಂದು ಅಮಿತ್​ ಶಾ ಆರೋಪಿಸಿದ್ದರು.

ಸುದರ್ಶನ್ ರೆಡ್ಡಿ ನಕ್ಸಲಿಸಂಗೆ ಸಹಾಯ ಮಾಡಿದ ವ್ಯಕ್ತಿ. ರೆಡ್ಡಿ ಸಾಲ್ವಾ ಜುಡುಮ್ ತೀರ್ಪು ನೀಡಿದರು. ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ, 2020 ರ ವೇಳೆಗೆ ನಕ್ಸಲ್ ಭಯೋತ್ಪಾದನೆ ಕೊನೆಗೊಳ್ಳುತ್ತಿತ್ತು. ಸಾಲ್ವಾ ಜುಡುಮ್ ತೀರ್ಪು ನೀಡಿದ ಸಿದ್ಧಾಂತದಿಂದ ಪ್ರೇರಿತರಾದ ವ್ಯಕ್ತಿ ಎಂದು ಅಮಿತ್ ಶಾ ಹೇಳಿದ್ದಾರೆ.

ಮಾವೋವಾದಿ ದಂಗೆಕೋರರ ವಿರುದ್ಧ ಹೋರಾಡಲು ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಕೋಯಾ ಕಮಾಂಡೋಗಳು ಅಥವಾ ಸಾಲ್ವಾ ಜುಡುಮ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪದ್ಧತಿಯನ್ನು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಘೋಷಿಸಿ ನ್ಯಾಯಮೂರ್ತಿ ರೆಡ್ಡಿ ಬರೆದ 2011ರ ಸುಪ್ರೀಂ ಕೋರ್ಟ್ ತೀರ್ಪನ್ನು ಗೃಹ ಸಚಿವರು ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net