

ವಾಷಿಂಗ್ಟನ್: ಟೆಕ್ನಾಲಜಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರದಿಂದಲೇ ಅನ್ವಯವಾಗುವಂತೆ ನಿವೃತ್ತಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಮೈಕ್ರೋಸಾಫ್ಟ್ ಕಂಪನಿ ಈ ವಿಷಯವನ್ನು ಶುಕ್ರವಾರ ಪ್ರಕಟಿಸಿದೆ. ಇದೇ ರೀತಿ ಬಿಲ್ ಗೇಟ್ಸ್ ಅವರು ಬರ್ಕ್ಶೈರ್ ಹಾಥವೇ ಕಂಪನಿಯ ಆಡಳಿತ ಮಂಡಳಿಯಿಂದಲೂ ಹೊರನಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮಕ್ರೋಸಾಫ್ಟ್ ಮತ್ತು ಬರ್ಕ್ಶೈರ್ ಹಾಥವೇ ಕಂಪನಿಗಳ ಆಡಳಿತ ಮಂಡಳಿಗಳಿಂದ ನಿವೃತ್ತನಾಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಉಳಿದ ಬದುಕಿನ ಸಮಯವನ್ನು ಜಾಗತಿಕ ಆರೋಗ್ಯ, ಅಭಿವೃದ್ಧಿ, ಶಿಕ್ಷಣ ಮುಂತಾದ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತೇನೆ. ಅದೇ ರೀತಿ, ನನ್ನ ಹೆಚ್ಚಿನ ಸಮಯ ಹವಾಮಾನ ಬದಲಾವಣೆಯ ಸಮಸ್ಯೆಗೆ ಪರಿಹಾರ ಕಾಣುವುದಕ್ಕೆ ಮೀಸಲಿರುತ್ತದೆ ಎಂದು ತಮ್ಮ ಲಿಂಕ್ಡ್ ಇನ್ ಪುಟದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೆ, ಮೈಕ್ರೋಸಾಫ್ಟ್ ಮತ್ತು ಬರ್ಕ್ಶೈರ್ ಕಂಪನಿಗಳ ನಾಯಕತ್ವ ಎಂದಿಗೂ ಬಲಿಷ್ಠವಾಗಿರಲಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಸಕಾಲ ಎಂಬ ನಿರ್ಣಯಕ್ಕೆ ಬಂದೆ. ಮೈಕ್ರೋಸಾಫ್ಟ್ಗೆ ಸಂಬಂಧಿಸಿ ಹೇಳುವುದಾದರೆ, ಕಂಪನಿಯ ಆಡಳಿತ ಮಂಡಳಿಯಿಂದ ದೂರ ಇದ್ದೇನೆ ಎಂದರೆ ಕಂಪನಿಯಿಂದಲೇ ದೂರ ಇರುತ್ತೇನೆ ಎಂದು ಅರ್ಥವಲ್ಲ. ಮೈಕ್ರೋ ಸಾಫ್ಟ್ ಯಾವತ್ತಿದ್ದರೂ ನನ್ನ ಬದುಕಿನ ವೃತ್ತಿಯ ಒಂದು ಮಹತ್ವದ ಭಾಗವಾಗಿಯೇ ಇರುತ್ತದೆ. ಅಲ್ಲದೆ, ಸತ್ಯ ಮತ್ತು ಟೆಕ್ನಿಕಲ್ ಲೀಡರ್ಶಿಪ್ ಜತೆಗೆ ನಾನು ಸಂಪರ್ಕದಲ್ಲಿದ್ದು ಕಂಪನಿಯ ಮಹತ್ವಾಕಾಂಕ್ಷಿ ಗುರಿಗಳನ್ನು ತಲುಪಲು ಅದಕ್ಕೆ ಬೇಕಾದ ವಿಷನ್ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇನೆ. ಕಂಪನಿಯ ಪ್ರಗತಿಯ ಬಗ್ಗೆ ಹಿಂದೆಂದಿಗಿಂತಲೂ ಈಗ ನಾನು ಹೆಚ್ಚು ಆಶಾವಾದಿಯಾಗಿದ್ದು, ಅದರಿಂದ ಜಗತ್ತಿಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬ ಬಗ್ಗೆ ಚಿಂತನೆ ನಡೆಸುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)