

ನವದೆಹಲಿ: ಪ್ರಯೋಗಗಳನ್ನು ಮಾಡಲು ಭಾರತ ಸೂಕ್ತ ಸ್ಥಳ ಎಂದು ಹೇಳುವ ಮೂಲಕ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ಲಿಂಕ್ಡ್‌ಇನ್ ಸಹ-ಸಂಸ್ಥಾಪಕ ರೀಡ್ ಹಾಫ್ಮ್ಯಾನ್ ನಡೆಸಿಕೊಡುವ ಪಾಡ್ಕಾಸ್ಟ್ನಲ್ಲಿ ಈ ಬಗ್ಗೆ ಮಾತನಾಡಿರುವ ಬಿಲ್ಗೇಟ್ಸ್ ಭಾರತವನ್ನು ಪ್ರಯೋಗಶಾಲೆಯಂತೆ ಪರಿಗಣಿಸಿರುವುದಾಗಿ ಹೇಳಿದ್ದು, ಈ ವಿಚಾರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತದಲ್ಲಿ ಬಹಳಷ್ಟು ಕ್ಲಿಷ್ಟಕರ ಸಂಗತಿಗಳೆನಿಸಿದ್ದ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಯ ಪರಿಸ್ಥಿತಿ ಈಗ ಅಲ್ಲಿ ಉತ್ತಮಗೊಳ್ಳುತ್ತಿದೆ. ಸಾಕಷ್ಟು ಸ್ಥಿರತೆ ಸಾಧಿಸಲಾಗಿದೆ. ಸರ್ಕಾರಕ್ಕೂ ಆದಾಯ ತಂದುಕೊಡುತ್ತಿದೆ. ಮುಂದಿನ 20 ವರ್ಷದಲ್ಲಿ ಅಲ್ಲಿನ ಜನರು ಇನ್ನೂ ಉತ್ತಮ ಸ್ಥಿತಿ ಪಡೆಯಬಹುದು. ಭಾರತದಂತಹ ದೇಶವು ಪ್ರಯೋಗಶಾಲೆಯಂತಿದ್ದು, ಹೊಸ ಪ್ರಯೋಗಗಳನ್ನು ಮಾಡಬಹುದು. ಅವು ಅಲ್ಲಿ ಯಶಸ್ವಿಯಾದಲ್ಲಿ ಬೇರೆಡೆ ಅದನ್ನು ಜಾರಿಗೆ ತರಬಹುದು ಎಂದು ಹೇಳಿದ್ದಾರೆ.
ಅಮೆರಿಕದ ಹೊರಗೆ ನಮ್ಮ ಅತಿದೊಡ್ಡ ಕಛೇರಿ ಇರುವುದು ಭಾರತದಲ್ಲೇ. ಅತಿ ಹೆಚ್ಚು ಹೊಸ ಪ್ರಯೋಗಗಳನ್ನು ನಾವು ಭಾರತದಲ್ಲಿನ ಸಹಭಾಗಿದಾರರ ಜೊತೆಗೂಡಿ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನ ಹೊತ್ತಿಸಿದ್ದಾರೆ. ಭಾರತೀಯರು ಬಿಲ್ ಗೇಟ್ಸ್ ಹೇಳಿಕೆಯನ್ನು ಖಂಡಿಸಿದ್ದು,
ಬಿಲ್ ಗೇಟ್ಸ್ಗೆ ನಾವು ಭಾರತೀಯರು ಇಲಿಗಳಂತೆ ಕಅಣುತ್ತಿದ್ಧೇವೆ. ಈ ವ್ಯಕ್ತಿಯು ಸರ್ಕಾರದಿಂದ ವಿರೋಧ ಪಕ್ಷಗಳವರೆಗೆ ಮಾಧ್ಯಮದವರೆಗೆ ಎಲ್ಲರನ್ನೂ ನಿರ್ವಹಿಸಿದ್ದಾರೆ. ಅವರ ಕಚೇರಿ ಎಫ್‌ಸಿಆರ್‌ಎ ಇಲ್ಲದೆ ಇಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಅವನನ್ನು ಹೀರೋ ಮಾಡಿದೆ ಎಂದು ನೆಟ್ಟಿಗರು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.