ಗಿರಿ ಶ್ರೇಣಿಯಲ್ಲಿ ಬಿಲವಾರ ಹಣ್ಣುಗಳ ಸುಗ್ಗಿ

ckm fruits
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಿಟ್ಟಿರುವ ಅಪರೂಪದ ಬಿಲವಾರದ ಹಣ್ಣುಗಳು.
Published on

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಪರೂಪದ ಬಿಲವಾರದ ಹಣ್ಣುಗಳ ಸುಗ್ಗಿ ಆರಂಭಗೊಂಡಿದೆ. ಅತ್ಯಂತ ರುಚಿಕರವಾಗಿರುವ ಈ ಹಣ್ಣುಗಳು ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಹೇರಳವಾಗಿ ಈ ಹಣ್ಣುಗಳು ಸಿಗುತ್ತಿರುವುದರಿಂದ ಗಿರಿ ಶ್ರೇಣಿಯಲ್ಲಿ ಪ್ರವಾಸಿಗರು ಬಿಲವಾರದ ಹಣ್ಣುಗಳಿಗೆ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ.
ಹೌದು, ಪ್ರತಿವರ್ಷ ಏಪ್ರಿಲ್ ಹಾಗೂ ಮೇ ಆರಂಭದಲ್ಲಿ ಬಿಲವಾರದ ಹಣ್ಣುಗಳು ಹೇರಳವಾಗಿ ಸಿಗುತ್ತವೆ. ಕೇವಲ 15 ದಿನ ಸಿಗುವ ಈ ಹಣ್ಣುಗಳು ದಾರಿಯಲ್ಲಿ ಸಾಗುವ ಪ್ರತಿಯೊಬ್ಬರ ಬಾಯಲ್ಲೂ ನೀರೂರಿಸುತ್ತವೆ. ಹಣ್ಣುಗಳ ರುಚಿ ಗೊತ್ತಿದ್ದವರು ಹಣ್ಣುಗಳನ್ನು ನೋಡಿ ಹಾಗೆಯೇ ಮುಂದೆ ಹೋಗಲು ಸಾಧ್ಯವೇ ಇಲ್ಲ. ಸಾಕೆನಿಸುಷ್ಟು ತಿನ್ನುವ ಜತೆಗೆ ಹಣ್ಣುಗಳನ್ನು ಮನೆಗಳಿಗೂ ಕೊಂಡೊಯ್ಯುತ್ತಿದ್ದಾರೆ.
ಇಂದಿನ ಯುವಪೀಳಿಗೆಗೆ ಕಾಡು ಹಣ್ಣುಗಳ ಮಾಹಿತಿಯೇ ಇಲ್ಲ. ಜತೆಗೆ ಅವುಗಳ ವಿಶಿಷ್ಟ ರುಚಿಯೂ ಗೊತ್ತಿಲ್ಲ. ಕೇವಲ 15 ದಿನ ಬರಪೂರವಾಗಿ ಸಿಗುವ ಬಿಲವಾರದ ಹಣ್ಣುಗಳು ಮಳೆ ಬಂತೆಂದರೆ ಉದುರಲು ಆರಂಭಿಸುತ್ತವೆ. ಹೀಗಾಗಿ ಮಳೆ ಆರಂಭಗೊಳ್ಳುವ ಮುನ್ನವೇ ಗಿರಿ ಶ್ರೇಣಿಗೆ ತೆರಳುವ ಪ್ರವಾಸಿಗರಿಗೆ ಇಂಥ ಅಪರೂಪದ ಹಣ್ಣುಗಳನ್ನು ತಿನ್ನುವ ಅವಕಾಶ ಸಿಗಲಿದೆ. ಕಾಯಾಗಿರುವಾಗ ಹಸಿರು ಬಣ್ಣದಲ್ಲಿರುವ ಬಿಲಬಾರದ ಹಣ್ಣುಗಳು ಹಣ್ಣಾಗುತ್ತಿದ್ದಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಈ ಹಣ್ಣುಗಳು ಪಕ್ಷಿಗಳಿಗೂ ಅತ್ಯಂತ ಪ್ರಿಯವಾದ ಆಹಾರ. ಹೀಗಾಗಿಯೇ ಬಿಲವಾರದ ಹಣ್ಣುಗಳು ಬಿಟ್ಟರೆ ಪಕ್ಷಿಗಳು ಈ ಗಿಡದತ್ತಲೇ ಗಿರಕಿ ಹೊಡೆಯುತ್ತಿರುತ್ತವೆ.
ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದತ್ತಪೀಠ ಅತ್ತಿಗುಂಡಿ ಭಾಗದಲ್ಲಿ ಹೇರಳವಾಗಿ ಈ ಹಣ್ಣುಗಳು ಸಿಗುತ್ತವೆ. ಇನ್ನುಳಿದಂತೆ ಮಲೆನಾಡು ಪ್ರದೇಶದಲ್ಲಿಯೂ ಈ ಹಣ್ಣುಗಳು ಕಾಣಸಿಗುತ್ತವೆೆ. ಮುಳ್ಳಿನಿಂದ ಕೂಡಿದ ಗಿಡದಲ್ಲಿ ಈ ಹಣ್ಣುಗಳು ಬಿಡುವ ಕಾರಣಕ್ಕೆ ಇವುಗಳಿಗೆ ಮುಳ್ಳು ಹಣ್ಣು ಎಂದೂ ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net