ಹೊಸ ನಿಯಮ ತಿಳಿಯದೇ ಪೊಲೀಸರಿಗೇ ಆವಾಜ್; ಕೊನೆಗೆ ಸವಾರನೇ ಕಕ್ಕಾಬಿಕ್ಕಿ!

trafic police
Published on

ಮಂಡ್ಯ: ಮೈ-ಬೆಂ ಹೆದ್ದಾರಿಯಲ್ಲಿ ನಿನ್ನೆಯಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೊಸ ರೂಲ್ಸ್ ಜಾರಿ ಮಾಡಲು ಮಂಡ್ಯದ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ಮೈ-ಬೆಂ ಎಕ್ಸ್​ಪ್ರೆಸ್​ವೇನಲ್ಲಿ ಆಗಸ್ಟ್ 1ರಿಂದ ಬೈಕ್, ಆಟೋ ರಿಕ್ಷಾಗಳ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಹೊಸ ನಿಯಮದ ಬಗ್ಗೆ ಮಂಡ್ಯದ ಪೊಲೀಸರು ಜಾಗೃತಿ ಮೂಡಿಸಿದ್ದರು.

ಆದರೂ ಕೆಲ ವಾಹನ ಸವಾರರು ನಿರ್ಬಂಧದ‌ ನಡುವೆಯೂ ಸಂಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಪಾಲಿಸದ ಸವಾರರ ಮೇಲೆ ಪೊಲೀಸರು ದಂಡದ ಪ್ರಯೋಗವನ್ನೂ ಮಾಡಿದ್ದಾರೆ. ಸದ್ಯ ಆದೇಶ ಪಾಲಿಸದವರಿಗೆ 500 ರೂಪಾಯಿ ದಂಡ ಬೀಳುತ್ತಿದೆ. ಹೀಗಾಗಿ ಬಹುತೇಕ ಸರ್ವಿಸ್ ರಸ್ತೆಯತ್ತ ನಿರ್ಬಂಧಿತ ವಾಹನ ಸವಾರರು ಮುಖ ಮಾಡಿದ್ದಾರೆ.

ಹೊಸ ನಿಯಮ ತಿಳಿಯದೇ ಪೊಲೀಸರಿಗೇ ಆವಾಜ್!

ಎಕ್ಸ್‌ಪ್ರೆಸ್‌ವೇನಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಬೈಕ್ ಸವಾರನೊಬ್ಬ ಆವಾಜ್ ಹಾಕಿದ್ದಾನೆ. ನೂತನ ನಿಯಮಗಳ ಬಗ್ಗೆ ತಿಳಿಯದೇ ಈತ ರೂಲ್ಸ್​ ಬ್ರೇಕ್​ ಮಾಡಿದ್ದಲ್ಲದೇ, ಪೊಲೀಸರೊಂದಿಗೂ ವಾದಕ್ಕೆ ಇಳಿದಿದ್ದ. ಈ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ.

ಈತ, ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಹೆಲ್ಮೆಟ್ ಕೂಡ ಹಾಕದೆ ಬೈಕ್ ಸವಾರಿ ಮಾಡಿದ್ದು, ಈ ವೇಳೆ ಬೈಕ್ ತಡೆದು ದಂಡ ಕಟ್ಟುವಂತೆ ಪೊಲೀಸರು ಹೇಳಿದ್ದಾರೆ. ಅದಕ್ಕೆ ಈ ಸವಾರ, "ನನಗೆ ಗೊತ್ತಿಲ್ಲ‌ ನಾನು ದಂಡ ಕಟ್ಟಲ್ಲ. ನೀವು ಹೈವೇಗೆ ಹತ್ತುವಾಗ ಹತ್ತಬೇಡಿ ಅಂತಾ ಹೇಳಲ್ಲ. ಈಗ ದಂಡ ಕಟ್ಟಿ ಅಂತೀರಾ, ನಾನು ಕಟ್ಟಲ್ಲ. ನಂಗೆ ಹೊಸ ನಿಯಮ ಗೊತ್ತಿಲ್ಲ" ಎಂದು‌ ಪೊಲೀಸರ ವಿರುದ್ಧ ಕಿಡಿಕಾರಿದ್ದ.

ಅದಕ್ಕೆ ಪೊಲೀಸರೂ, "ನೀವು ಹತ್ತುವಾಗ ಬೋರ್ಡ್ ಹಾಕಿದ್ದೇವೆ ನೋಡಿದ್ರಾ?ನಿನ್ನೆ ಮೊನ್ನೆಯಿಂದ ಟಿವಿಯಲ್ಲಿ ಬರ್ತಾ ಇದೆ ನೋಡಿಲ್ವಾ?" ಎಂದು ಪ್ರಶ್ನಿಸಿದ್ದರೂ, ಸವಾರ ಮಾತ್ರ "ಹೊಸ ರೂಲ್ಸ್ ಎಲ್ಲೂ ನೋಡಿಲ್ಲ. ನಾನು ಫೈನ್​ ಕಟ್ಟಲ್ಲ" ಎಂದು ಮೊಂಡುವಾದ ಮಾಡುತ್ತಿದ್ದ.

"ಹೊಸ ರೂಲ್ಸ್​ ಗೊತ್ತಿಲ್ಲ ಅಂತೀಯಾ, ನಿನ್ ಹೆಲ್ಮೆಟ್​ ಎಲ್ಲಿ?"

ಅದಕ್ಕೆ ಸರಿಯಾದ ಪಾಯಿಂಟ್​ ಹಿಡಿದ ಪೊಲೀಸರು, "ಸರಿಯಪ್ಪಾ ಹೊಸ ರೂಲ್ಸ್ ಗೊತ್ತಿಲ್ಲ ಅಂತೀಯಾ ಹೆಲ್ಮೆಟ್ ಯಾಕೆ ಹಾಕಿಲ್ಲ? ನಿಂಗೆ ಹೆಲ್ಮೆಟ್ ಹಾಕೋ ಹಳೆ‌ ರೂಲ್ಸ್ ಗೊತ್ತಿಲ್ವಾ?" ಎಂದು ಪೊಲೀಸರು ರಿವರ್ಸ್ ಪ್ರಶ್ನೆ ಕೇಳಿದ್ದು, ಬೈಕ್ ಸವಾರ ಕಕ್ಕಾಬಿಕ್ಕಿಯಾಗಿದ್ದಾನೆ. ಆಗ ಅಲ್ಲಿ ಸೇರಿದ್ದ ಸಾರ್ವಜನಿಕರೂ ಈ ಬೈಕ್​ ಸವಾರನಿಗೆ ಕ್ಲಾಸ್​ ತೆಗೆದುಕೊಂಡಿದ್ದು, "ಅವರು, ನಮ್ಮ ಒಳ್ಳೆಯದಕ್ಕೆ ಹೇಳೋದು ಅಲ್ವಾ?" ಎಂದು ಕೇಳಿದ್ದಾರೆ. ಇದರಿಂದಾಗಿ ಕಕ್ಕಾಬಿಕ್ಕಿಯಾದ ಬೈಕ್ ಸವಾರ ಬೇರೆ ದಾರಿ ಕಾಣದೇ ದಂಡ ಕಟ್ಟಿ ತೆರಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net