ಬೈಕ್ ಸವಾರನಿಗೆ ಗುದ್ದಿದ್ದ ಕೋಲೆ ಬಸವನ ದೃಶ್ಯ ವೈರಲ್

accident-15
Published on

ಬೆಂಗಳೂರು: ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಕೋಲೆ ಬಸವ ಎದುರಿಗೆ ಬರುತ್ತಿದ್ದ ಬೈಕ್ ಸವಾರನಿಗೆ ಏಕಾಏಕಿ ಗುದ್ದಿದ್ದ ಪರಿಣಾಮ ಆತ ಹಾರಿ ಐಷರ್ ವಾಹನದ ಕೆಳಗೆ ಬಿದ್ದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಹಾಲಕ್ಷ್ಮಿ ಲೇಔಟ್‌ನ ಸ್ವಿಮ್ಮಿಂಗ್ ೂಲ್ ಜಂಕ್ಷನ್ ಬಳಿ ಈ ಘಟನೆ ಕಳೆದ ವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಉಗ್ರ ಸ್ವರೂಪ ತಾಳಿದ ಕೋಲೆ ಬಸವ:
ಮಹಿಳೆಯೊಬ್ಬರು ಕೋಲೆ ಬಸವನನ್ನು ಹಿಡಿದುಕೊಂಡು ರಸ್ತೆ ಬದಿಯಲ್ಲಿ ಹೋಗುತ್ತಿದ್ದರು. ಮಹಿಳೆಯನ್ನು ಹಿಂಬಾಲಿಸುತ್ತಾ ಶಾಂತವಾಗಿ ನಡೆದು ಹೋಗುತ್ತಿದ್ದ ಕೋಲೆ ಬಸವ ಏಕಾಏಕಿ ಉಗ್ರ ಸ್ವರೂಪ ತಾಳಿ, ಎದುರುಗಡೆಯಿಂದ ತನ್ನ ಪಾಡಿಗೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ ಎರಗಿದೆ. ದ್ವಿಚಕ್ರ ವಾಹನದತ್ತ ಜಿಗಿದ ಕೋಲೆ ಬಸವ, ಸವಾರನಿಗೆ ಗುದ್ದಿ ಓಡಿ ಹೋಗಿದೆ. ಬಸವ ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸರಕು ಸಾಗಣೆ ವಾಹನದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಕಾರ್ಯಪ್ರವೃತನಾದ ವಾಹನದ ಚಾಲಕ, ಏಕಾಏಕಿ ಬ್ರೇಕ್ ಹಾಕಿ ವಾಹನ ನಿಲ್ಲಿಸಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ದ್ವಿಚಕ್ರ ವಾಹನ ಸವಾರ ಬದುಕುಳಿದಿದ್ದಾನೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ:
ಕೋಲೆ ಬಸವನ ಅಟ್ಟಹಾಸ ಮತ್ತು ದ್ವಿಚಕ್ರ ವಾಹನ ಸವಾರನ ಪ್ರಾಣ ಉಳಿಸಿದ ಸರಕು ಸಾಗಣೆ ವಾಹನ ಚಾಲಕನ ಸಮಯ ಪ್ರಜ್ಞೆಯ ವಿಡಿಯೋ ಘಟನಾ ಸ್ಥಳದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾವ ಕಾರಣಕ್ಕೆ ಕೋಲೆ ಬಸವ ಪ್ರಚೋದನೆಗೊಂಡಿತು ಎಂಬುದು ತಿಳಿಯುತ್ತಿಲ್ಲವಾದರೂ, ಸರಕು ಸಾಗಣೆ ವಾಹನದ ಚಾಲಕನ ಸಮಯ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net