ರಸ್ತೆ ದುರವಸ್ಥೆಗೆ ಮತ್ತೊಂದು ಬಲಿ; ಕಾಮಗಾರಿಗಾಗಿ ಅಗೆದಿದ್ದ ಸ್ಥಳದಲ್ಲಿ ಅಪಘಾತ, ಬೈಕ್ ಸವಾರ ಸಾವು, ಚಾಲಕ ಪರಾರಿ

Bike
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ, ರಸ್ತೆ ಅವಾಂತರಗಳಿಗೆ ಸಾರ್ವಜನಿಕರು ಮೇಲಿಂದ ಮೇಲೆ ಬಲಿಯಾಗುತ್ತಿದ್ದು, ಇಂದು ಮತ್ತೊಬ್ಬ ರಸ್ತೆ ದುರವಸ್ಥೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ ರಾಜಾಜಿನಗರದಲ್ಲಿ ಈ ಅವಘಡ ಸಂಭವಿಸಿದೆ.

ಮಾರಪ್ಪನಪಾಳ್ಯದ ನಿವಾಸಿ ಕುಮಾರ್ (35) ಸಾವಿಗೀಡಾದ ವ್ಯಕ್ತಿ. ರಾಜಾಜಿನಗರದ ರಾಜ್​​ಕುಮಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಕುಮಾರ್ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ರಸ್ತೆ ಕಾಮಗಾರಿಗಾಗಿ ಅಗೆದ ಸ್ಥಳದಲ್ಲಿ ಸ್ಕಿಡ್ ಆಗಿ ಬಿದ್ದಿದ್ದ. ಅದೇ ವೇಳೆಗೆ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಕುಮಾರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಅಪಘಾತ ಆಗುತ್ತಿದ್ದಂತೆ ಚಾಲಕ ಟ್ರ್ಯಾಕ್ಟರ್ ಸಹಿತ ಪರಾರಿಯಾಗಿದ್ದಾನೆ. ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರ್ ಹಾಗೂ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ. ರಸ್ತೆ ಕಾಮಗಾರಿಗಾಗಿ ಕಾರ್ಮಿಕರು ಅಗೆದದ್ದು, ಟ್ರ್ಯಾಕ್ಟರ್ ಸಾಗುವಾಗ ಅದರ ಟ್ರಾಲಿ ಬೈಕ್ ಸವಾರನಿಗೆ ತಾಗಿ, ಆತ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net