ಬಿಎಂಟಿಸಿ ಬಸ್ ಸರಣಿ ಅಪಘಾತಕ್ಕೆ ಬೈಕ್ ಸವಾರ ಬಲಿ

accident-15
Published on

ಬೆಂಗಳೂರು: ಬಿಎಂಟಿಸಿ ಬಸ್ ಸರಣಿ ಅಪಘಾತ ಎಸಗಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಬುಲೆಟ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೈಸೂರು ಮೂಲದ ಮೃತ ಸುಪ್ರಿತ್ (೩೩) ಮೃತ ಸವಾರ. ಮಾಲ್ ಆಫ್ ಏಷಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಪ್ರಿತ್, ಕೆಲ ವರ್ಷಗಳಿಂದ ಕೆ.ಆರ್.ಪುರದ ನಿಸರ್ಗ ಬಡಾವಣೆಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಾಗಿದ್ದರು.
ಸುಪ್ರಿತ್, ಶುಕ್ರವಾರ ರಾತ್ರಿ ೯.೪೫ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದು, ಹಳೇ ಮದ್ರಾಸ್ ರಸ್ತೆಯ ಐಟಿಐ ಗೇಟ್ ಮುಂಭಾಗದ ರಸ್ತೆ ಬದಿ ಬುಲೆಟ್ ನಿಲ್ಲಿಸಿಕೊಂಡು ನಿಂತಿದ್ದರು. ಅದೇ ವೇಳೆ ಬಿಎಂಟಿಸಿ ಬಸ್ ಚಾಲಕ ಅತೀವೇಗ ಮತ್ತು ನಿರ್ಲಕ್ಷ್ಯದಿಂದ ಎಂ.ಎಂ.ಟೆಂಪಲ್ ಕಡೆಯಿಂದ ಕೆ.ಆರ್.ಪುರ ಕಡೆಗೆ ಬಂದು, ನಿಂತಿದ್ದ ಸುಪ್ರಿತ್ ಬುಲೆಟ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೆ, ಅದೇ ರಸ್ತೆಯಲ್ಲಿ ನಿಂತಿದ್ದ ಟ್ಯಾಂಕರ್ ವಾಹನಕ್ಕೆ ಬುಲೆಟ್ ಸಮೇತ ಅಪ್ಪಳಿಸಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸುಪ್ರಿತ್‌ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸುಪ್ರಿತ್ ಮೃತಪಟ್ಟಿದ್ದಾರೆ. ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲದೆ, ಘಟನೆಯಲ್ಲಿ ಕಾಂಕ್ರಿಟ್ ಮಿಕ್ಸರ್ ಲಾರಿ, ಟ್ಯಾಂಕರ್, ಬುಲೆಟ್, ಒಂದು ಬಿಎಂಟಿಸಿ ಬಸ್ ಹಾಗೂ ವೋಲ್ವೋ ಬಸ್ ಕೂಡ ಹಾನಿಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net