

ಬೆಂಗಳೂರು: ಮದ್ಯದ ಅಮಲಿನಲ್ಲಿ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಮಸಂದ್ರದ ನಿವಾಸಿ ಉಪನ್ಯಾಸಕ ನರಸಪ್ಪ (51) ಮತ್ತು ಉಲ್ಲಾಳದ ರಕ್ಷಾ (21) ಮೃತರು. ರಕ್ಷಾ ಎಂಬಾಕೆಯನ್ನು ಕೂರಿಸಿಕೊಂಡು ಹೋಗುತ್ತಿದ್ದ ಸವಾರ ಚಂದನ್ (23) ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಗೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನರಸಪ್ಪ ಕೆಲಸ ಮಾಡುತ್ತಿದ್ದರು. ಕಿಂಡರ್ ಗಾರ್ಡನ್‌ನಲ್ಲಿ ರಕ್ಷಾ ಶಿಕ್ಷಕಿಯಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಚಂದನ್ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ರಾತ್ರಿ 11.30ರಲ್ಲಿ ನರಸಪ್ಪ, ಶ್ರೀನಗರದಿಂದ ಬೈಕ್‌ನಲ್ಲಿ ರಾಮಸಂದ್ರ ಮನೆಗೆ ಹೋಗುತ್ತಿದ್ದರು.
ಕೆಂಗೇರಿ ಉಪನಗರ ಕಡೆಯಿಂದ ಉಲ್ಲಾಳ ಮುಖ್ಯರಸ್ತೆ ಕೆಎಲ್ಇ ಕಾಲೇಜು ಮಾರ್ಗದಲ್ಲಿ ಚಂದನ್ ಮತ್ತು ರಕ್ಷಾ ಪಲ್ಸರ್‌ನಲ್ಲಿ ಅತೀ ವೇಗವಾಗಿ ತೆರಳುತ್ತಿದ್ದರು.
ಮಾರುತಿನಗರ ಮುಖ್ಯರಸ್ತೆ ಎದುರುಗಡೆಯಿಂದ ಇನ್ನೊಂದು ಬೈಕ್‌ನಲ್ಲಿ ಬಂದ ನರಸಪ್ಪಗೆ ಪಲ್ಸರ್ ಸವಾರ ಚಂದನ್ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ 50 ಮೀಟರ್‌ನಷ್ಟು ರಸ್ತೆ ಮೇಲೆ ದ್ವಿಚಕ್ರ ವಾಹನಗಳು ಉಜ್ಜಿಕೊಂಡು ಹೋಗಿವೆ. ನರಸಪ್ಪಗೆ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ಚಂದನ್ ಮತ್ತು ರಕ್ಷಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೇ ರಕ್ಷಾ ಅಸುನೀಗಿದ್ದಾರೆ.
ಮದ್ಯದ ಅಮಲಿನಲ್ಲಿ ಚಂದನ್, ಪಲ್ಸರ್ ಬೈಕ್‌ನಲ್ಲಿ ರಕ್ಷಾಳನ್ನು ಕೂರಿಸಿಕೊಂಡು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಚಂದನ್ ಮದ್ಯ ಸೇವನೆ ಕುರಿತು ವೈದ್ಯಕೀಯ ವರದಿ ಬಂದ ಮೇಲೆ ಆರೋಪಪಟ್ಟಿಯಲ್ಲಿ ಹೆಚ್ಚುವರಿ ಸೆಕ್ಷನ್ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪಲ್ಸರ್ ಬೈಕ್ ಸವಾರ ಚಂದನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ತನಿಖೆ ವೇಳೆ ಪಲ್ಸರ್ ಬೈಕ್ ಸವಾರ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಆತನ ರಕ್ತದ ಮಾದರಿ ಪಡೆದಿದ್ದು, ವೈದ್ಯಕೀಯ ವರದಿಯಿಂದ ಖಚಿತವಾಗಲಿದೆ. ಪಲ್ಸರ್ ಬೈಕ್ ಅತೀ ವೇಗವೇ ಅಪಘಾತಕ್ಕೆ ಕಾರಣವಾಗಿದೆ.
ಡಾ. ಡಿ. ಸುಮನಾ ಪನ್ನೀಕರ್ - ಡಿಸಿಪಿ ಪಶ್ಚಿಮ ಸಂಚಾರ ವಿಭಾಗ