

ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿಸಲು ನಿರ್ಧರಿಸುವುದನ್ನು ಸರ್ಕಾರ ಕೈ ಬಿಡುವಂತೆ ಹಾಗೂ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ರಾಮಾಪುರದಿಂದ ಬೈಕ್ ರ‌್ಯಾಲಿಯೊಂದಿಗೆ ಚಾಮರಾಜನಗರ ಜಿಲ್ಲಾಡಳಿತ ಕಚೇರಿಗೆ ತೆರಳಿದರು.
ಬೈಕ್ ರ‌್ಯಾಲಿಯಲ್ಲಿ ಭಾಗಿಯಾಗಿದ್ದ ಸುಮಾರು 250ಕ್ಕೂ ಹೆಚ್ಚು ರೈತರು ಹನೂರು ಪಟ್ಟಣಕ್ಕೆ ಆಗಮಿಸಿದರು. ಈ ವೇಳೆ ನೆರೆದಿದ್ದವರಲ್ಲಿ ನಿಬ್ಬೆರಗಾಗುವಂತೆ ಮಾಡಿತು. ಹುಲಿ ಯೋಜನೆ ಬೇಡ. ಜನರು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಘೋಷಣೆಗಳು ರೈತರಿಂದ ಕೇಳಿಬಂದವು.
ಈ ವೇಳೆ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಮುಖ್ಯ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಜಲಾಶಯವಿದ್ದರೂ ಸಮರ್ಪಕ ನೀರಾವರಿ ಸೌಕರ್ಯವಿಲ್ಲ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿದೆ. ಇನ್ನು ಕಾಡಂಚಿನ ಗ್ರಾಮಗಳಲ್ಲಿ ಸಮರ್ಪಕ ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯವಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇನ್ನು ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಗಳ ಸಾವನ್ನು ಗಂಭಿರವಾಗಿ ಪರಿಗಣಿಸಿರುವ ಸರ್ಕಾರ ಈ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಲು ಮುಂದಾಗಿದೆ. ಈ ಯೋಜನೆ ಜಾರಿಯಾದರೆ ಜನರು ಹಾಗೂ ರೈತರಿಗೆ ತುಂಬ ತೊಂದರೆಯಾಗಲಿದೆ. ಆದ್ದರಿಂದ ನಿರ್ಧರಿಸಿರುವ ಹುಲಿ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಬಳಿಕ ಬೈಕ್ ರ‌್ಯಾಲಿಯು ಕೊಳ್ಳೇಗಾಲ, ಯಳಂದೂರು ಹಾಗೂ ಸಂತೇಮರಳಿ ಮೂಲಕ ಚಾಮರಾಜನಗರದತ್ತ ತೆರಳಿತು.
ಸಂಘದ ತಾಲೂಕು ಉಪಾಧ್ಯಕ್ಷ ಪಳನಿಸ್ವಾಮಿ, ಪದಾಧಿಕಾರಿಗಳಾದ ಕೂಡಲೂರು ವೆಂಕಟಾಚಲ, ವರದರಾಜು, ವೇಲುಸ್ವಾಮಿ, ನಾಗರಾಜು, ಮಹದೇವ ಹಾಗೂ ಇನ್ನಿತರರು ಇದ್ದರು.