

Patna: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಇಂದು(ಅ. 14) ಪಾಟ್ನಾದಲ್ಲಿ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ Maithili Thakur ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮೈಥಿಲಿ ಠಾಕೂರ್ ದರ್ಭಂಗ ಜಿಲ್ಲೆಯ ಅಲಿನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. 243 ಸ್ಥಾನಗಳ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿರುವ ಮೈಥಿಲಿ, ನಾನು ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಂದ ಪ್ರಭಾವಿತಳಾಗಿದ್ದೇನೆ. ಅವರಿಂದ ಸ್ಫೂರ್ತಿ ಪಡೆದು, ಅವರನ್ನು ಬೆಂಬಲಿಸಲು ಇಲ್ಲಿದ್ದೇನೆ. ಒಂದು ರಾಜಕೀಯ ಪಕ್ಷ ಸೇರಿದ್ದು ರಾಜಕೀಯ ಮಾಡಲು ಅಲ್ಲ, ಸಮಾಜ ಸೇವೆ ಮಾಡಲು, ಸಿದ್ದಾಂತವನ್ನು ಪ್ರತಿಯೊಬ್ಬರಿಗೆ ತಲುಪಿಸಲು ಸೇರಿದ್ದೇನೆ. ನಾನು ಮಿಥಿಲಾದ ಮಗಳು, ನನ್ನ ಆತ್ಮವು ಮಿಥಿಲಾದಲ್ಲಿ ಇದೆ. ಪಕ್ಷ ಏನು ಜವಾಬ್ದಾರಿ ನೀಡುತ್ತೋ ಅದನ್ನು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಮಾತನಾಡಿ, ಬಿಹಾರದಲ್ಲಿ ಮತ್ತೆ ಎನ್‌ಡಿಎ ಗೆಲುವಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಈಗಾಗಲೇ ಪೂರ್ಣಬಹುಮತದೊಂದಿಗೆ ಎನ್‌ಡಿಎ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳು ನಿರಾಶೆಗೊಂಡಿವೆ ಮತ್ತು ಖಿನ್ನತೆಗೆ ಒಳಗಾಗಿವೆ. ಆರ್‌ಜೆಡಿ-ಕಾಂಗ್ರೆಸ್‌ನ ಒಂದು ಡಜನ್‌ಗೂ ಹೆಚ್ಚು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.
ಎನ್‌ಡಿಎ ಕೂಟ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಇಂದು(ಅ. 14) ಬಿಜೆಪಿ ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಲ್‌ಜೆಪಿ (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಮತ್ತು ಸಣ್ಣ ಮಿತ್ರಪಕ್ಷಗಳು ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್)