

Javed Akhtar: ಆರು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರಿಗೆ ನೀಡಿದ ಸ್ವಾಗತವನ್ನು ಭಾರತೀಯ ಚಿತ್ರಕಥೆಗಾರ-ಗೀತರಚನೆಕಾರ ಜಾವೇದ್ ಅಖ್ತರ್ ಖಂಡಿಸಿದ್ದು, ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಜಾವೇದ್ ಅಖ್ತರ್, ಎಲ್ಲಾ ರೀತಿಯ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಿದವರು ವಿಶ್ವದ ಅತ್ಯಂತ ಕೆಟ್ಟ ಭಯೋತ್ಪಾದಕ ಗುಂಪು ತಾಲಿಬಾನ್‌ನ ಪ್ರತಿನಿಧಿಗೆ ನೀಡಿದ ಗೌರವ ಮತ್ತು ಸ್ವಾಗತವನ್ನು ನೋಡಿದಾಗ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ಮುಂದುವರೆದು ಮುತ್ತಕಿಗೆ ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್ ಸೆಮಿನರಿಗಳಲ್ಲಿ ಒಂದಾದ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿರುವ ದಾರುಲ್ ಉಲೂಮ್ ದಿಯೋಬಂದ್ ಅನ್ನು ಟೀಕಿಸಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿದವರಲ್ಲಿ ಒಬ್ಬರಾದ ತಮ್ಮ ‘ಇಸ್ಲಾಮಿಕ್ ಹೀರೋ’ಗೆ ಇಷ್ಟೊಂದು ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಿಯೋಬಂದ್‌ಗೂ ನಾಚಿಕೆಯಾಗಬೇಕು. ನನ್ನ ಭಾರತೀಯ ಸಹೋದರ ಸಹೋದರಿಯರೇ, ನಮಗೆ ಏನಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ನಾಯಕರೊಬ್ಬರು ಭಾರತಕ್ಕೆ ಬಂದದ್ದು ಇದೇ ಮೊದಲು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್ ನಿರ್ಬಂಧ ಸಮಿತಿಯು ತಾಲಿಬಾನ್ ನಾಯಕನ ಮೇಲೆ ವಿಧಿಸಲಾದ ಪ್ರಯಾಣ ನಿಷೇಧಕ್ಕೆ ವಿನಾಯಿತಿಯನ್ನು ಅನುಮೋದಿಸಿದ ನಂತರ ಮುತ್ತಕಿ ಭಾರತಕ್ಕೆ ಭೇಟಿ ನೀಡಿದ್ದಾರೆ. (ಏಜೆನ್ಸೀಸ್)