

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಐದು ದಿಬ ಬಾಕಿ ಇರುವಂತೆ ಸಿಎಂ ನಿತೀಶ್ ಕುಮಾರ್(CM Nitish Kumar) ಇಂದು(ನ. 01) ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ್ದು, ಬಿಹಾರ ಜನರಿಗೆ ಸಂದೇಶ ನೀಡಿದ್ದಾರೆ. ನಾನು ನನ್ನ ಕುಟುಂಬಕ್ಕಾಗಿ ಏನನ್ನೂ ಮಾಡಿಲ್ಲ. ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ್ದಾರೆ.
ಜೆಡಿಯು ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ, ಈ ಹಿಂದೆ ರಾಜ್ಯದ ಪರಿಸ್ಥಿತಿ ಭಯಂಕರವಾಗಿತ್ತು. ನಾನು ಸ್ವಂತ ಕುಟುಂಬಕ್ಕಾಗಿ ಏನೂ ಮಾಡಿಕೊಂಡಿಲ್ಲ ಎಂದು ಪರೋಕ್ಷವಾಗಿ ಆರ್ಜೆಡಿಯ ಲಾಲು ಪ್ರಸಾದ್ ಯಾದವ್ ಅವರನ್ನು ಟೀಕಿಸಿದ್ದು, 2005 ರಿಂದ ಜೆಡಿ(ಯು)ಗೆ ಬೆಂಬಲ ನೀಡಿದ್ದಕ್ಕಾಗಿ ಬಿಹಾರದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮತ್ತು ಎನ್ಡಿಎ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಬಿಹಾರಿಯಾಗಿರುವುದು ಅವಮಾನಕರವಾಗಿತ್ತು
2005ಕ್ಕೂ ಮೊದಲು 'ಬಿಹಾರಿಯಾಗಿರುವುದು ಅವಮಾನಕರ ವಿಷಯವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಬಿಹಾರದಲ್ಲಿ ಅಧಿಕಾರ ನೀಡಿದ್ದೀರಿ. ಮೊದಲನೆಯದಾಗಿ, ಅದನ್ನು ಸರಿಪಡಿಸುವ ಕೆಲಸವನ್ನು ಮಾಡಲಾಯಿತು. ಅದರೊಂದಿಗೆ, ಶಿಕ್ಷಣ, ಆರೋಗ್ಯ, ರಸ್ತೆಗಳು, ವಿದ್ಯುತ್, ಕುಡಿಯುವ ನೀರು, ಕೃಷಿ ಮತ್ತು ಯುವಕರಿಗೆ ಉದ್ಯೋಗದ ಪರಿಸ್ಥಿತಿಯು ಬಹಳ ಸುಧಾರಿಸಿತು. ಅಂದಿನಿಂದ ನಾವು ಪೂರ್ಣ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಹಗಲಿರುಳು ನಿಮಗೆ ಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಆಗಿದ್ದ ಲಾಲು ಪ್ರಸಾದ್ ಯಾದವ್ ಏನೂ ಮಾಡಲಿಲ್ಲ
ಬಿಹಾರ ಸಿಎಂ ಆಗಿದ್ದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ಏನೂ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿರುವ ಅವರು, ಹಿಂದಿನ ಸರ್ಕಾರ ಮಹಿಳೆಯರಿಗಾಗಿ ಯಾವುದೇ ಕೆಲಸ ಮಾಡಲಿಲ್ಲ. ನಾವು ಈಗ ಮಹಿಳೆಯರನ್ನು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ಅಂದ್ರೆ, ಅವರು ಇನ್ನೊಬ್ಬರ ಮೇಳೆ ಅವರು ಇನ್ಮುಂದೆ ಯಾರನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ನಾವು ಮೊದಲಿನಿಂದಲೂ ಸಮಾಜದ ಎಲ್ಲಾ ವರ್ಗಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಹಿಂದೂ, ಮುಸ್ಲಿಂ, ಮೇಲ್ಜಾತಿ, ಹಿಂದುಳಿದವರು, ತೀರಾ ಹಿಂದುಳಿದವರು, ದಲಿತರು, ಮಹಾದಲಿತರು ಎಲ್ಲರಿಗೂ ಕೆಲಸ ಮಾಡಿದ್ದೇವೆ. ನಾವು ನಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಿಲ್ಲ. ಈಗ, ಬಿಹಾರಿಯಾಗಿರುವುದು ಅವಮಾನದ ವಿಷಯವಲ್ಲ, ಗೌರವದ ವಿಷಯ ಎಂದು ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿರುವ ಅವರು, ಪ್ರಧಾನಿ ಮೋದಿ ಅವರ ಬೆಂಬಲದಿಂದ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಆದ್ದರಿಂದ, ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವಿನಂತಿಸಿದ್ದಾರೆ. ನಮಗೆ ಇನ್ನೊಂದು ಅವಕಾಶ ನೀಡಿ. ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು. ನವೆಂಬರ್ 6 ಮತ್ತು ನವೆಂಬರ್ 11 ರಂದು, ನೀವು ನಿಮ್ಮ ಮತದಾನ ಕೇಂದ್ರಗಳನ್ನು ತಲುಪಿ ಸಾಧ್ಯವಾದಷ್ಟು ಮತ ಚಲಾಯಿಸಬೇಕು ಎಂದು ಕೊನೆಯದಾಗಿ ಜೈ ಹಿಂದ್, ಜೈ ಬಿಹಾರ್ ಎಂದಿದ್ದಾರೆ. (ಏಜೆನ್ಸೀಸ್)