Bihar Election| ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿಯು

untitled-design-2025-10-15t135105038-68ef597b8d991
Published on

ಪಾಟ್ನಾ: ಮುಂಬರುವ ಬಿಹಾರ ಚುನಾವಣೆಗೆ (Bihar Election) ಸಂಯುಕ್ತ ಜನತಾದಳ (ಜೆಡಿಯು) ಪಕ್ಷದಿಂದ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ (ಅ.15) ಬಿಡುಗಡೆ ಮಾಡಿದ್ದು, ಎನ್​ಡಿಯ ಚೌಕಟ್ಟಿನಡಿಯಲ್ಲಿ ಸೀಟು ಹಂಚಿಕೆ ಕುರಿತು ನಡೆದ ಮತುಕತೆಯ ಬಳಿಕ ಈ ಘೋಷಣೆ ಹೊರಬಿದ್ದಿದೆ.

ಪಟ್ಟಿಯ ಪ್ರಕಾರ, 57 ಅಭ್ಯರ್ಥಿಗಳಲ್ಲಿ ನಾಲ್ವರು ಮಹಿಳೆಯರ ಹೆಸರು ಕೇಳಿಬಂದಿದೆ. ಚುನಾವಣೆಗೆ ಎನ್​ಡಿಎ ಸೀಟು ಹಂಚಿಕೆಯ ವ್ಯವಸ್ಥೆಯನ್ನು ಅಂತಿಮಗೊಳಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹರಹೊಮ್ಮಿದೆ. ಮೊದಲ ಹಂತದ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನಗಳು ಬಾಕಿ ಇರುವಾಗ, ಜೆಡಿಯುನ ಈ ಕ್ರಮವು ಅದರ ಔಪಚಾರಿಕ ಪ್ರಚಾರ ಪ್ರಕ್ರಿಯೆಯ ಆರಂಭವನ್ನು ಸೂಚಿಸುತ್ತಿದೆ ಎಂದು ವರದಿಯಾಗಿದೆ.

ಚುನಾವಣಾ ಆಯೋಗದ ನಾಮಪತ್ರ ಸಲ್ಲಿಕೆಗೆ ಅವಕಾಶ ಮುಗಿಯುವುದಕ್ಕಿಂತ ಮುಂಚೆ ಮಿತ್ರಪಕ್ಷಗಳು ಸಾಮರಸ್ಯದೊಂದಿಗೆ ಉಳಿದ ಸ್ಥಾನಗಳನ್ನು ತುಂಬಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಟ್ಟಿ ಬಿಡುಗಡೆಯ ನಂತರ ಆಡಳಿತ ಮೈತ್ರಿಕೂಟದೊಳಗೆ ಅಸಮಾಧಾನ ಲಕ್ಷಣಗಳು ಕಂಡುಬಂದಿವೆ. ಮಂಗಳವಾರ, ಜೆಡಿಯು ಸಂಸದ ಅಜಯ್ ಕುಮಾರ್ ಮಂಡಲ್ ರಾಜೀನಾಮೆ ನೀಡಲು ಮುಂದಾಗಿದ್ದು, ಮುಖ್ಯಮಂತ್ರಿ ನಿತೀಶ್​ ಕುಮಾರ್​ನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಕೆಲವು ಹೇಳಿಕೆಗಳು ಪಕ್ಷದ ಕೆಲವು ಸದಸ್ಯರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ ಎಂದು ಊಹಾಪೋಹಗಳು ಬಂದಿವೆ.

ಆದಾಗ್ಯೂ, ಸಾಮ್ರಾಟ್ ಚೌಧರಿ, ನಿತ್ಯಾನಂದ ರೈ ಮತ್ತು ನಿತಿನ್ ನಬಿನ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಮಂಗಳವಾರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರನ್ನು ಅವರ ಪಾಟ್ನಾ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದರು. ಈ ವೇಳೆ ಸೀಟು ಹಂಚಿಕೆಯ ಸೂತ್ರದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದು, ಈ ಬಾರಿ ಎನ್‌ಡಿಎಯಲ್ಲಿ ಏನೂ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಸೀಟು ಹಂಚಿಕೆ ಬಗ್ಗೆ ಇನ್ನೂ ಮಾಹಿತಿ ಹೊರಬಿಡದ ವಿರೋಧ ಪಕ್ಷಗಳು

ವಿರೋಧ ಪಕ್ಷವಾದ ಮಹಾಘಟಬಂಧನ್ ಮೈತ್ರಿಕೂಟವು ತನ್ನ ಸ್ಥಾನ ಹಂಚಿಕೆ ವ್ಯವಸ್ಥೆಯನ್ನು ಈವರೆಗೂ ಘೋಷಿಸಿಲ್ಲ. ಪ್ರತಿಯೊಂದು ಪಕ್ಷವು ಸ್ವತಂತ್ರವಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದರೊಂದಿಗೆ, ಅಂತಿಮ ಸ್ಥಾನ ವಿನಿಮಯವನ್ನು ನಿರ್ಧರಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net