

Bihar Election: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಘೋಪುರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದು ಸಾಂಪ್ರದಾಯಿಕವಾಗಿ ಆರ್ಜೆಡಿ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದೆ.
ರಾಘೋಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಕಿಶೋರ್, ನಾನು ಎಲ್ಲಿಂದ ಸ್ಪರ್ಧಿಸಬೇಕು ಎನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ನಾಳೆ ನಡೆಯಲಿರುವ ಕೇಂದ್ರ ಸಮಿತಿ ಸಭೆಗೆ ಮುಂಚಿತವಾಗಿ ಇಲ್ಲಿನ ಜನರನ್ನು ಭೇಟಿ ಮಾಡಿ, ಅವರ ಅಭಿಪ್ರಾಯಗಳನ್ನು ಆಲಿಸಲಿದ್ದೇನೆ. ಅಂತಿಮವಾಗಿ ಚುನಾವಣೆಯ ಬಗ್ಗೆ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವಿಷಯದಲ್ಲಿ ಇಲ್ಲಿನ ಜನರ ನಿರ್ಧಾರವೇ ಅಂತಿಮ ಎಂದರು.
ನಾನು ರಾಘೋಪುರದಿಂದ ಸ್ಪರ್ಧಿಸಿದರೆ ತೇಜಸ್ವಿ ಯಾದವ್ ಎರಡು ಸ್ಥಾನಗಳಿಂದ ಸ್ಪರ್ಧಿಸಬೇಕಾಗುತ್ತದೆ. 2019 ರಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಎದುರಿಸಿದ ಪರಿಸ್ಥಿತಿಯನ್ನೇ, ಈಗ ತೇಜಸ್ವಿ ಎದುರಿಸಬೇಕಾಗುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಅನೇಕ ದಶಕಗಳಿಂದ ಅಮೇಥಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ, ರಾಹುಲ್ ಗಾಂಧಿಯನ್ನು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸೋಲಿಸಿದರು.
ರಾಘೋಪುರ್ ಕ್ಷೇತ್ರ ಕೂಡ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಇಲ್ಲಿನ ಮತದಾರರು ಆ ಕುಟುಂಬಕ್ಕೆ ಅನೇಕ ದಶಗಳಿಂದ ಆಶೀರ್ವಾದ ಮಾಡುತ್ತಲೇ ಬಂದಿದ್ದಾರೆ. ಲಾಲು ಪ್ರಸಾದ್ ಯಾದವ್ ಇಲ್ಲಿಂದ ಎರಡು ಬಾರಿ, ಅವರ ಪತ್ನಿ ರಾಬ್ರಿ ದೇವಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಇಬ್ಬರೂ ರಾಘೋಪುರ್ ಅನ್ನು ಪ್ರತಿನಿಧಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮಗ ತೇಜಸ್ವಿ ಯಾದವ್ 2015 ಮತ್ತು 2020 ರಲ್ಲಿ ಎರಡು ಬಾರಿ ಇಲ್ಲಿಂದ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ದಾರೆ ಮತ್ತು ಉಪಮುಖ್ಯಮಂತ್ರಿ ಮತ್ತು ವಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಹಾರ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ, ಜನ ಸುರಾಜ್ ಪಕ್ಷ 51 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಭೋಜ್ಪುರಿ ಗಾಯಕ ರಿತೇಶ್ ಪಾಂಡೆ, ಮಾಜಿ ಐಪಿಎಸ್ ಅಧಿಕಾರಿ ಆರ್ಕೆ ಮಿಶ್ರಾ ಮತ್ತು ದಿವಂಗತ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಜಾಗೃತಿ ಠಾಕೂರ್ ಇದ್ದಾರೆ. 51 ಅಭ್ಯರ್ಥಿಗಳಲ್ಲಿ ಜಾತಿ ಲೆಕ್ಕಾಚಾರ ಹಾಕುವುದಾದರೆ 11 ಜನ ಹಿಂದುಳಿದ ವರ್ಗ, 17 ಜನ ಅತ್ಯಂತ ಹಿಂದುಳಿದ ವರ್ಗ, ಒಂಬತ್ತು ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಮತ್ತು ಉಳಿದವರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ.
ಪಾಟ್ನಾ ವಿಶ್ವವಿದ್ಯಾಲಯ ಮತ್ತು ನಳಂದ ಮುಕ್ತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ.ಸಿ. ಸಿನ್ಹಾ, ಭೋಜ್ಪುರಿ ಗಾಯಕ ರಿತೇಶ್ ರಂಜನ್ ಪಾಂಡೆ ಮತ್ತು ಅಮಿತ್ ಕುಮಾರ್ ದಾಸ್, ಶಶಿ ಶೇಖರ್ ಸಿನ್ಹಾ ಮತ್ತು ಲಾಲ್ ಬಾಬು ಪ್ರಸಾದ್ ಸೇರಿದಂತೆ ಹಲವಾರು ವೈದ್ಯರು ನಾಮನಿರ್ದೇಶನಗೊಂಡಿರುವ ಗಮನಾರ್ಹ ಹೆಸರುಗಳಲ್ಲಿ ಸೇರಿವೆ. ಇತರ ಪ್ರಮುಖ ಹೆಸರುಗಳೆಂದರೆ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಅವರ ಪುತ್ರಿ ಲತಾ ಸಿಂಗ್, ಜಾಗೃತಿ ಠಾಕೂರ್, ವಕೀಲ ವೈ.ವಿ. ಗಿರಿ ಮತ್ತು ತೃತೀಯ ಲಿಂಗ ಸಮುದಾಯದ ಪ್ರಿತ್ತಿ ಕಿನ್ನರ್.
ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರ ಬೀಳಲಿದೆ.(ಏಜೆನ್ಸೀಸ್)