Bihar Election | ನವೆಂಬರ್​ 6 ರಂದು ಬಿಹಾರದ ಚುನಾವಣೆ; ಎರಡು ಹಂತದಲ್ಲಿ ಮತದಾನ

Gyanesh Kumar
Published on

Bihar Election: ದೇಶದ ಗಮನಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನವೆಂಬರ್​​ 6 ರಂದು ಮೊದಲ ಹಂತ ಮತ್ತು ​ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.

ನವೆಂಬರ್ 6 ರಂದು ನಡೆಯುವ ಮೊದಲ ಹಂತದ ಮತದಾನವು ಪ್ರವಾಹ ಪೀಡಿತ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಮಧ್ಯ ಬಿಹಾರದ 121 ಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ನವೆಂಬರ್ 11 ರಂದು ನಡೆಯುವ ಎರಡನೇ ಹಂತದ ಮತದಾನವು ಗಡಿ ಪ್ರದೇಶಗಳಲ್ಲಿನ 122 ಕ್ಷೇತ್ರಗಳಿಗೆ ನಡೆಯಲಿದೆ. ಅಕ್ಟೋಬರ್​​ 10 ರಂದು ಮೊದಲ ಹಂತ ಮತ್ತು 13 ರಂದು ಎರಡನೇ ಹಂತದ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದ್ದು, ಅಕ್ಟೊಬರ್​ 17 (ಮೊದಲ ಹಂತ) ಮತ್ತು 20 ರಂದು (ಎರಡನೇ ಹಂತ) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದ ಆಯೋಗದ ಮುಖ್ಯಸ್ಥರು, ಬಿಹಾರದಲ್ಲಿ ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಮತಗಟ್ಟೆಗಳಿಗೆ ಹೊಸ ಸ್ವರೂಪವನ್ನು ನೀಡಲಾಗಿದ್ದು, ಎಲ್ಲಾ ಕಡೆಗಳಲ್ಲೂ ವೀಲ್‌ಚೇರ್ ಸೌಲಭ್ಯಗಳು ಲಭ್ಯವಿರಲಿದೆ. ಇತ್ತಿಚೆಗೆ ಬಿಹಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಯೋಗದ ತಂಡ ಸದಸ್ಯರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಸಂಸ್ಥೆಗಳಿಗೆ ಚುನಾವಣೆಯ ಸಮಯದಲ್ಲಿ ಯಾವುದೇ ರೀತಿಯ ಹಿಂಸಾಚಾರದ ನಡೆಯದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಬಿಹಾರದಲ್ಲಿ ಒಟ್ಟು 7.42 ಕೋಟಿ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಅದರಲ್ಲಿ 3.92 ಕೋಟಿ ಪುರುಷರು ಮತ್ತು 3.5 ಕೋಟಿ ಮಹಿಳೆಯರು, 14 ಲಕ್ಷ ಜನ ಹೊಸ ಮತದಾರರು ತಮ್ಮ ಮತಚಲಾಯಿಸಲಿದ್ದಾರೆ, ಇವರೆಲ್ಲರಿಗೂ ಅತಿ ಶೀಘ್ರದಲ್ಲಿ ಗುರುತಿನ ಚೀಟಿಗಳನ್ನು ನೀಡಲಾಗುವುದು ಎಂದರು.

ಆಕ್ಷೇಪಣೆಗಿದೆ ಅವಕಾಶ..

ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಬಿಹಾರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅಥವಾ ಅಳಿಸುವಿಕೆಗೆ ಸಂಬಂಧಪಟ್ಟ ಆಕ್ಷೇಪಣೆಗಳಿಗೆ ಅವಕಾಶವಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ 3.66 ಲಕ್ಷ ಹೆಚ್ಚುವರಿ ಮತದಾರರನ್ನು ಅಳಿಸಲಾಗಿದೆ.

ಉಪಚುನಾವಣೆಗಳು

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಜೊತೆಗೆ, ನವೆಂಬರ್ 11 ರಂದು ಬೇರೆ ರಾಜ್ಯಗಳ 8 ವಿಧಾನಸಭಾ ಉಪಚುನಾವಣೆಗಳು ನಡೆಯಲಿವೆ ನವೆಂಬರ್ 14 ರಂದು ಬಿಹಾರ ವಿಧಾನಸಭಾ ಚುನಾವಣೆಯ ಜೊತೆಗೆ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.

ಮತದಾನ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿರುವ ಆಯೋಗ, 17 ಹೊಸ ಉಪಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅನುಷ್ಠಾನ, ಪ್ರತಿ ಮತಗಟ್ಟೆಗೆ ನಿಗದಿಪಡಿಸಲಾದ ಮತದಾರರ ಸಂಖ್ಯೆಯನ್ನು 1,200 ಕ್ಕೆ ಮಿತಿಗೊಳಿಸಲಾಗಿದೆ, ಇವಿಎಂಗಳಲ್ಲಿ ಬಣ್ಣದ ಛಾಯಾಚಿತ್ರಗಳ ಬಳಕೆ ಮತ್ತು ಮತಗಟ್ಟೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇದಿಸಿ ಆದೇಶ ಹೊರಡಿಸಿದೆ. ಈ ಎಲ್ಲ ಸುಧಾರಣೆಗಳು ದೇಶಾದ್ಯಂತ ಭವಿಷ್ಯದ ಚುನಾವಣೆಗಳಿಗೆ ಮಾದರಿಯಾಗಲಿದ್ದು, ಇದನ್ನು ಮುಂಬರುವ ಎಲ್ಲ ರಾಜ್ಯಗಳ ಚುನಾವಣೆಗೂ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದಲ್ಲಿ ಮಹಾಮಾರಿ ಕೋವಿಡ್-19 ಅಬ್ಬರದ ನಡುವೆಯೂ 2020 ರ ವಿಧಾನಸಭಾ ಚುನಾವಣೆಗಳು ಮೂರು ಹಂತಗಳಲ್ಲಿ ನಡೆದವು. ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net