ಬಿಹಾರ ಚುನಾವಣೆ ಹೈಜಾಕ್ ಯತ್ನ

rahul gandhi
Published on

ಭುವನೇಶ್ವರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರೀತಿಯಲ್ಲೇ ಬಿಹಾರದಲ್ಲೂ ಚುನಾವಣೆಯನ್ನು ಹೈಜಾಕ್ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ (ಇಸಿಐ) ತನ್ನ ಕರ್ತವ್ಯ ನಿರ್ವಹಿಸದೆ ಬಿಜೆಪಿಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂದೂ ಅವರು ದೂಷಿಸಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿ ‘ಸಂವಿಧಾನ ಬಚಾವೋ ಸಮಾವೇಶ’ದಲ್ಲಿ ಮಾತನಾಡಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಆಗದಂತೆ ತಡೆಯಲು ಕಾಂಗ್ರೆಸ್ ಸೇರಿ ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ಬಿಜೆಪಿ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಿತು. ಈಗ ಬಿಹಾರದಲ್ಲೂ ಇದೇ ಯತ್ನ ನಡೆಯುತ್ತಿದೆ. ಬಿಜೆಪಿ ದೇಶಾದ್ಯಂತ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪ ಮಾಡಿದರು. ಮಹಾರಾಷ್ಟ್ರದ ಚುನಾವಣೆಗೆ ಮೊದಲು ಒಂದು ಕೋಟಿ ಮತದಾರರನ್ನು ಪಟ್ಟಿಗೆ ಹೇಗೆ ಸೇರಿಸಲಾಯಿತು? ಇದಕ್ಕೆ ಚುನಾವಣಾ ಆಯೋಗದಿಂದ ಯಾವುದೇ ಉತ್ತರವಿಲ್ಲ. ಬಿಜೆಪಿ ಸರ್ಕಾರ ಐದಾರು ಬಂಡವಾಳಶಾಹಿಗಳಿಗಾಗಿ ಆಡಳಿತ ನಡೆಸುತ್ತಿದೆ. ಸಾಮಾನ್ಯ ಜನರಿಗಾಗಿ ಅಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಜಾತ್ಯತೀತ ಪದ ಕೈಬಿಡಲು ಸಂಚು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ಪದ ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ಪದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ. ಬಿಜೆಪಿ ಸರ್ಕಾರ ಉದ್ಯಮದ ಹೆಸರಿನಲ್ಲಿ ಎಲ್ಲೆಡೆ ಕಾಡುಗಳನ್ನು ನಾಶಪಡಿಸುತ್ತಿದೆ. ಬುಡಕಟ್ಟು ಸಮುದಾಯಗಳು, ದಲಿತರು, ಮಹಿಳೆಯರು ಮತ್ತು ಯುವಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯದಿದ್ದರೆ ಅವರನ್ನೂ ಸಹ ನಿರ್ನಾಮ ಮಾಡುತ್ತಾರೆ ಎಂದು ಖರ್ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ದೇಶಾದ್ಯಂತ 160 ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಸ್ಥಾಪಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಇವುಗಳಲ್ಲಿ 23 ಅನ್ನು ಖಾಸಗೀಕರಣಗೊಳಿಸಿದೆ. ಮೋದಿ ಸಾರ್ವಜನಿಕ ಆಸ್ತಿಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net