

ಪಟನಾ: ದೇಶದ ಗಮನ ಸೆಳೆದಿರುವ ಹೈಪ್ರೋಫೈಲ್ ಬಿಹಾರ ವಿಧಾನಸಭಾ ಚುನಾವಣೆಯ ( Bihar Election ) ಮೊದಲ ಹಂತದ ಮತದಾನ ಇಂದು (ನ.06) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಸ್ಥಾನಗಳಿದ್ದು, ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ರಾಜ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಭಾರೀ ನಿರೀಕ್ಷೆಯಲ್ಲಿದೆ.
ಮತದಾನವೆಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪೂರ್ಣ ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಮತದಾರರಿಗೆ ಮನವಿ ಮಾಡಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸಲಿರುವ ರಾಜ್ಯದ ನನ್ನ ಎಲ್ಲಾ ಯುವ ಸಹಚರರಿಗೆ ನನ್ನ ವಿಶೇಷ ಅಭಿನಂದನೆಗಳು. ನೆನಪಿಡಿ ಮೊದಲು ಮತದಾನ, ನಂತರ ಉಪಾಹಾರ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
ಬಿಹಾರ ಇಂದಿಗೂ ಜಾತಿ ಆಧಾರಿತವಾಗಿಯೇ ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಇಲ್ಲಿನ ಮತದಾರರು ಅಭಿವೃದ್ಧಿ ನೋಡಿ ಮತ ನೀಡುವುದಕ್ಕಿಂತ ತಮ್ಮ ಸಮುದಾಯದ ವ್ಯಕ್ತಿಗೆ ಮತ ಹಾಕುವುದು ಮೊದಲಿನಿಂದ ನಡೆದುಕೊಂಡಬಂದ ಪದ್ಧತಿ. ಇಂದು ಮತದಾನ ನಡೆಯಲಿರುವ 121 ಕ್ಷೇತ್ರಗಳ ಪೈಕಿ 26 ಸ್ಥಾನಗಳಲ್ಲಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಪ್ರಬಲ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕಠಿಣ ಸ್ಪರ್ಧೆಯನ್ನೊಡ್ಡಿದ್ದು, ಸುಮಾರು 33 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಜಾತಿ ಆಧಾರಿತವಾಗಿ ನೇರ ಸ್ಪರ್ಧೆಯಲ್ಲಿವೆ. ಮೂರು ಕ್ಷೇತ್ರಗಳಲ್ಲಿ ಜೆಡಿಯುನ ಕುರ್ವಿು ಸಮುದಾಯದ ಅಭ್ಯರ್ಥಿಗಳು ಆರ್ಜೆಡಿಯ ಯಾದವ ಸಮುದಾಯದ ಅಭ್ಯರ್ಥಿಗಳ ವಿರುದ್ಧ, ನಾಲ್ಕು ಕ್ಷೇತ್ರಗಳಲ್ಲಿ ಕುಶ್ವಾಹ ಸಮುದಾಯದ ಅಭ್ಯರ್ಥಿಗಳು ಹಾಗೂ ಆರು ಸ್ಥಾನಗಳಲ್ಲಿ ಅತ್ಯಂತ ಹಿಂದುಳಿದ ವರ್ಗದ ಅಭ್ಯರ್ಥಿಗಳು ಆರ್ಜೆಡಿಯ ಯಾದವ ಸಮುದಾಯದ ಅಭ್ಯರ್ಥಿಗಳೊಂದಿಗೆ ನೇರ ಸ್ಪರ್ಧೆಯಲ್ಲಿದ್ದಾರೆ.
ಜೆಡಿಯು ಮತ್ತು ಆರ್ಜೆಡಿಯ ಯಾದವ ಅಭ್ಯರ್ಥಿಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಸಮಷ್ಟಿಪುರ ಜಿಲ್ಲೆಯ ಹಸನ್ಪುರ ಕ್ಷೇತ್ರದಲ್ಲಿ ಜೆಡಿಯುನ ರಾಜ್ ಕುಮಾರ್ ರೈ ಹಾಗೂ ಆರ್ಜೆಡಿಯ ಮಾಲಾ ಪುಷ್ಪಂ ಹಾಗೂ ಸಾರನ್ ಜಿಲ್ಲೆಯ ಪರ್ಸಾ ಕ್ಷೇತ್ರದ ಜೆಡಿಯುನ ಛೋಟೆ ಲಾಲ್ ರೈ ಹಾಗೂ ಆರ್ಜೆಡಿಯ ಕರಿಷ್ಮಾ ರೈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯಾದವ ಸಮುದಾಯ ನಮ್ಮೊಂದಿಗಿದೆ ಎಂಬ ಸಂದೇಶ ಸಾರಲು ಪೈಪೋಟಿ ನಡೆಸುತ್ತಿದ್ದಾರೆ.
121 ಸ್ಥಾನಗಳ ಪೈಕಿ ಜೆಡಿಯು ಅಭ್ಯರ್ಥಿಗಳ ವಿರುದ್ಧ 10 ಕಡೆ ಹಾಗೂ ಬಿಜೆಪಿ ವಿರುದ್ಧ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೆಣಸಾಟ ನಡೆಸುತ್ತಿದೆ. ಇವುಗಳಲ್ಲಿ ಪಟನಾ, ಗೋಪಾಲ್ ಗಂಜ್ ಮತ್ತು ಮುಜಫುರ್ ಜಿಲ್ಲೆಗಳ ಹಲವು ಕ್ಷೇತ್ರಗಳು ಒಳಗೊಂಡಿವೆ. ಲಖಿಸರಾಯ್ನಲ್ಲಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಅಮರೇಶ್ ಕುಮಾರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪಟನಾ ಸಾಹಿಬ್ನಲ್ಲಿ, ಬಿಜೆಪಿಯ ರತ್ನೇಶ್ ಕುಶ್ವಾಹ, ಯಾದವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಶಶಾಂತ್ ಶೇಖರ್ರನ್ನು ಎದುರಿಸುತ್ತಿದ್ದಾರೆ.
ಮೊದಲ ಹಂತದಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ 23 ಸ್ಥಾನಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಸಚಿವರಾದ ಮಂಗಲ್ ಪಾಂಡೆ, ನಿತಿನ್ ನವೀನ್, ಕೃಷ್ಣ ಕುಮಾರ್ ಮಂಟು ಮತ್ತು ಕೇಂದ್ರದ ಮಾಜಿ ಸಚಿವ ರಾಮಕೃಪಾಲ್ ಯಾದವ್ ಅವರ ಕ್ಷೇತ್ರಗಳು ಸೇರಿವೆ. ಮಂಗಲ್ ಪಾಂಡೆ, ಮಾಜಿ ಸ್ಪೀಕರ್ ಮತ್ತು ಯಾದವ ಸಮುದಾಯದ ಅವಧ್ ಬಿಹಾರಿ ಚೌಧರಿಗೆ ಸವಾಲು ಒಡ್ಡಿದ್ದರೆ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿಗೆ ಆರ್ಜೆಡಿಯ ವೈಶ್ಯ ಸಮುದಾಯದ ಅರುಣ್ ಕುಮಾರ್, ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ಗೆ, ಅವರದೇ ಸಮುದಾಯದ ಬಿಜೆಪಿಯ ಸತೀಶ್ ಕುಮಾರ್ ಯಾದವ್ ಕಠಿಣ ಸ್ಪರ್ಧೆ ಒಡ್ಡಿದ್ದಾರೆ.
ಎನ್‌ಡಿಎ ಮತ್ತು ಮಹಾಘಟಬಂಧನ 18 ಕ್ಷೇತ್ರಗಳಲ್ಲಿ ಪ್ರಬಲ ವರ್ಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ ಎಂಟು ಕ್ಷೇತ್ರಗಳಲ್ಲಿ ಭೂಮಿಹಾರ್ ಸಮುದಾಯದವರು ಮತ್ತು ನಾಲ್ಕು ಸ್ಥಾನಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಿದ್ದಾರೆ. ದರ್ಬಾಂಗ ಜಿಲ್ಲೆಯ ಅಲಿನಗರದಿಂದ ಬಿಜೆಪಿಯ ಮೈಥಿಲಿ ಠಾಕೂರ್, ಆರ್ಜೆಡಿಯಿಂದ ವಿನೋದ ಮಿಶ್ರಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಇಂದು (ನವೆಂಬರ್ 6) ಬೆಳಗ್ಗೆ 7 ಗಂಟೆಯಿಂದ 121 ಸೀಟ್‌ಗಳಿಗೆ ಮೊದಲ ಹಂತದ ಮತದಾನ ಆರಂಭವಾಗಿದ್ದು, 3.75 ಕೋಟಿ ಮತದಾರರು 1,314 ಸ್ಪರ್ಧಿಗಳ ನಡುವೆ ತಮ್ಮಿಷ್ಟದವರನ್ನು ಆಯ್ಕೆ ಮಾಡುತ್ತಿದ್ದಾರೆ. ಎನ್‌ಡಿಎ (ಬಿಜೆಪಿ-ಜೆಡಿಯು) ಮತ್ತು ಮಹಾಗಟ್ಬಂಧನ್ (ಆರ್‌ಜೆಡಿ-ಕಾಂಗ್ರೆಸ್) ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ತೇಜಸ್ವಿ ಯಾದವ್ (ರಘೋಪುರ), ತೇಜ ಪ್ರತಾಪ್ ಯಾದವ್ (ಮಹುವಾ) ಸೇರಿದಂತೆ ಪ್ರಮುಖ ನಾಯಕರ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಎರಡನೇ ಹಂತ ನವೆಂಬರ್ 11ಕ್ಕೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಘೋಷಣೆಯಾಗಲಿದೆ. (ಏಜೆನ್ಸೀಸ್)