

ನವದೆಹಲಿ: ಇರೋದು ಒಂದೇ ಒಂದು ಎಂಎಲ್ಸಿ ಸೀಟು. ಅದಕ್ಕೆ 3,000 ಆಕಾಂಕ್ಷಿಗಳು! ಇದು ಬಿಹಾರ ಕಾಂಗ್ರೆಸ್ ನಾಯಕತ್ವಕ್ಕೆ ಎದುರಾಗಿರುವ ಸವಾಲು!
ಬಿಹಾರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಬಯಸಿ ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಘಟಾನುಘಟಿ ನಾಯಕರು, ಮಾಜಿ ಸಚಿವರು ಅರ್ಜಿ ಸಲ್ಲಿಸಿದ್ದಾರೆ. ಹೈಕಮಾಂಡ್ ತನಕವೂ ವಸೂಲಿಬಾಜಿ ಮಾಡೋದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ ಎಂಬ ಸುದ್ದಿ ಗಮನಸೆಳೆದಿದೆ.
ಆದಾಗ್ಯೂ ಕಾಂಗ್ರೆಸ್ ಪಕ್ಷದ ಬಿಹಾರ ಘಟಕದ ಮುಖ್ಯಸ್ಥ ಮದನ್ ಮೋಹನ್ ಝಾ ಈ ಒತ್ತಡದ ವಿಚಾರವನ್ನು ನಿರ್ಲಕ್ಷಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಇರುವಂತಹ ಪಕ್ಷದಲ್ಲಿ ಇವೆಲ್ಲ ಸರ್ವೇ ಸಾಮಾನ್ಯ ನಮ್ಮ ಪಕ್ಷದಲ್ಲಿ ಡೆಮಾಕ್ರಸಿ ಇದೆ. ಯಾರನ್ನು ಆ ಸ್ಥಾನಕ್ಕೆ ಪರಿಗಣಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಹೇಳಿಕೊಂಡಿದ್ದಾರೆ.
ಇದೇ ರೀತಿ ಕಾಂಗ್ರೆಸ್ ಪಕ್ಷದವರಾದ ಕಟಿಹಾರ್ನ ಶಾಸಕ ಶಕೀಲ್ ಅಹಮದ್ ಖಾನ್ ಕೂಡ ಹೇಳಿಕೆ ನೀಡಿದ್ದು, "ಇದ್ರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬಹುದು. ದೊಡ್ಡ ದೊಡ್ಡ ನಾಯಕರೂ ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಪಕ್ಷದಲ್ಲಿದೆ ಎಂಬುದನ್ನು ಇದು ಬಿಂಬಿಸುತ್ತದೆ. ನಮ್ಮ ಪಕ್ಷ ಒಬ್ಬ ವ್ಯಕ್ತಿಯಿಂದ ನಡೆಸಲ್ಪಡುವುದಲ್ಲ" ಎಂದು ಹೇಳಿದ್ದಾರೆ.
ಬಿಹಾರದಲ್ಲಿ ವಿಧಾನ ಪರಿಷತ್ನಲ್ಲಿ ಖಾಲಿ ಇರುವ ಒಂಭತ್ತು ಸದಸ್ಯ ಸ್ಥಾನಕ್ಕೆ ಜುಲೈ 6ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆಯೂ ನಡೆಯಲಿದೆ. ಜೂನ್ 25ಕ್ಕೆ ನಾಮ ನಿರ್ದೇಶನ ಸಲ್ಲಿಸಲು ಕೊನೇ ದಿನವಾಗಿದೆ. (ಏಜೆನ್ಸೀಸ್)