ಬೀಡಿಯೊಂದಿಗೆ ಬಿಹಾರ ಹೋಲಿಕೆ ವಿವಾದ; ಕೇರಳ ಕಾಂಗ್ರೆಸ್ ಟ್ವೀಟ್​ ಒಪ್ಪಲ್ಲ, ಅದು ತಪ್ಪು; ತೇಜಸ್ವಿ ಯಾದವ್| Tejashwi Yadav

Tejashwi Yadav 1
Published on

Tejashwi Yadav: ಕೇಂದ್ರ ಸರ್ಕಾರದ ಜಿಎಸ್​ಟಿ ಸುಧಾರಣೆಯನ್ನು ಟೀಕಿಸಿದ್ದ ಕೇರಳ ಕಾಂಗ್ರೆಸ್ ಘಟಕ, ಬೀಡಿಯೊಂದಿಗೆ ಬಿಹಾರವನ್ನು ಹೋಲಿಕೆ ಮಾಡಿತ್ತು. ಸದ್ಯ ಟ್ವೀಟ್ ಡಿಲಿಟ್ ಆಗಿದ್ದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಬಿಹಾರವನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಆರ್​ಜೆಡಿ ಈ ವಿವಾದದಿಂದ ಅಂತರ ಕಾಯ್ದುಕೊಂಡಿದೆ.

ಈ ಕುರಿತು ಮಾತನಾಡಿರುವ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಕೇರಳ ಕಾಂಗ್ರೆಸ್​ ಮಾಡಿದ ಟ್ವೀಟ್ ತಪ್ಪು, ಅದನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಜಿಎಸ್​ಟಿ ಸುಧಾರಣೆಗಳಲ್ಲಿ ಸಿಗರೇಟ್ ಮೇಲಿನ ಜಿಎಸ್‌ಟಿಯನ್ನು ಹೇಗೆ ಹೆಚ್ಚಿಸಲಾಗಿದೆ ಮತ್ತು ಬೀಡಿಗಳನ್ನು ಹೇಗೆ ಕಡಿಮೆ ಮಾಡಲಾಗಿದೆ ಎಂಬುದನ್ನು ಗುರುವಾರ ರಾತ್ರಿ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಕೇರಳ ಕಾಂಗ್ರೆಸ್ ಘಟಕವು ಎತ್ತಿ ತೋರಿಸಿದೆ. "ಬೀಡಿಗಳು ಮತ್ತು ಬಿಹಾರ ಬಿ ಯಿಂದ ಪ್ರಾರಂಭವಾಗುತ್ತವೆ. ಇನ್ನು ಮುಂದೆ ಪಾಪವೆಂದು ಪರಿಗಣಿಸಲಾಗುವುದಿಲ್ಲ" ಎಂದು ಬರೆದಿತ್ತು. ವಿವಾದವಾಗ್ತಿದ್ದಂತೆ ಡಿಲಿಟ್ ಮಾಡಿದೆ.

ಬಿಹಾರವು ಭಾರತದ ಪ್ರಮುಖ ಬೀಡಿ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ದೇಶದಲ್ಲಿ 70 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಈ ಉದ್ಯಮವು ಜಿಎಸ್‌ಟಿ ಕಡಿತಕ್ಕೆ ಒತ್ತಾಯಿಸಿತ್ತು.

ವಿವಾದವಾಗ್ತಿದ್ದಂತೆ ಸ್ಪಷ್ಟೀಕರಣ ನೀಡಿದ್ದ ಕೇರಳ ಕಾಂಗ್ರೆಸ್, NDTV ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು ಗರೇಟ್ ಮತ್ತು ಬೀಡಿಗಳ ವಿಭಿನ್ನ ದರಗಳ ಕುರಿತು ಮಾಹಿತಿ ನೀಡಿದೆ. ಜೊತೆಗೆ ಜಿಎಸ್‌ಟಿ ದರಗಳೊಂದಿಗಿನ ಮೋದಿಯವರ ಚುನಾವಣಾ ಗಿಮಿಕ್ ಬಗ್ಗೆ ನಮ್ಮ ಟೀಕೆಯನ್ನು ತಿರುಚಲಾಗುತ್ತಿದೆ. ನಿಮಗೆ ನೋವಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ" ಎಂದು ಹೇಳಿದೆ.

ಕಾಂಗ್ರೆಸ್ ಪೋಸ್ಟ್ ಬಗ್ಗೆ ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಿಡಿಕಾರಿದ್ದು,  ಬಿಹಾರವನ್ನು ಅಪಹಾಸ್ಯ ಮಾಡುವ ಮೂಲಕ, ಕಾಂಗ್ರೆಸ್ ಮತ್ತೊಮ್ಮೆ ಬಿಹಾರದ ಜನರನ್ನು ಅವಮಾನಿಸಿದೆ, ಜೊತೆಗೆ ದೇಶದ ಮತ್ತು ಪ್ರಜಾಪ್ರಭುತ್ವದ ಭವ್ಯ ಇತಿಹಾಸವನ್ನು ಅಪಹಾಸ್ಯ ಮಾಡಿದೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net