

Nirmala Sitharaman: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕ ನೀತಿಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಭಾರತೀಯ ರಪ್ತುದಾರರಿಗೆ ಬೆಂಬಲ ನೀಡಲು, ಶೀಘ್ರದಲ್ಲೇ ಪರಿಹಾರ ಪ್ಯಾಕೇಜ್ ಘೋಷಿಸಲಾಗುವುದು ಎಂದು ಶುಕ್ರವಾರ (ಸೆ. 05) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ
ಈ ಕುರಿತು ಮಾತನಾಡಿರುವ ಅವರು, ಕಠಿಣ ಸಂದರ್ಭಗಳಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಆಗಸ್ಟ್ 27 ರಿಂದ ಅಮೆರಿಕ ಜಾರಿಗೆ ತಂದಿರುವ ಶೇಕಡಾ 50 ರಷ್ಟು ಸುಂಕಗಳಿಂದ ಪರಿಣಾಮ ಅನುಭವಿಸುತ್ತಿರುವ ಕೈಗಾರಿಕೆಗಳಿಗೆ ಕೇಂದ್ರ ಪ್ಯಾಕೇಜ್ ಸಹಾಯಕವಾಗಲಿದೆ. ಕೈಗಾರಿಕೆಗಳು ತಮ್ಮ ಸಮಸ್ಯೆಗಳನ್ನು ವಿವರಿಸಿವೆ. ಸರ್ಕಾರಕ್ಕೆ ಇದರ ಬಗ್ಗೆ ಒಂದು ಆಲೋಚನೆ ಇದೆ. ಈ ಕುರಿತಾದ ಪ್ರಸ್ತಾವಿತ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಸುಂಕಗಳಿಂದ ಉಂಟಾಗುವ ಸವಾಲುಗಳನ್ನು ಪರಿಹರಿಸಲು ಕೇಂದ್ರವು 'ಸಮಗ್ರ ರಫ್ತು ಬೆಂಬಲ ತಂತ್ರ'ವನ್ನು ಅಂತಿಮಗೊಳಿಸಲು ಸಜ್ಜಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಪರಿಹಾರ ಕ್ರಮಗಳಂತೆಯೇ ಮಾರುಕಟ್ಟೆ ವೈವಿಧ್ಯೀಕರಣ ಮತ್ತು ಪೂರೈಕೆ ಸರಪಳಿ ಏಕೀಕರಣಕ್ಕಾಗಿ ಮಧ್ಯಮ ಮತ್ತು ದೀರ್ಘಾವಧಿಯ ತಂತ್ರಗಳನ್ನು ಸರ್ಕಾರ ಅನ್ವೇಷಿಸುತ್ತಿದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತೀಯ ಸರಕುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದರು, ಅದರ ಜೊತೆಗೆ ರಷ್ಯಾದಿಂದ ತೈಲ ಖರೀದಿ ಸಲುವಾಗಿ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸಿದ್ದರು. ಅದು ಆಗಸ್ಟ್ 27ರಿಂದ ಜಾರಿಗೆ ಬಂದಿದೆ. ಬಟ್ಟೆ, ಆಭರಣ, ಪಾದರಕ್ಷೆಗಳಿಂದ ಹಿಡಿದು ರಾಸಾಯನಿಕಗಳವರೆಗೆ ಎಲ್ಲಾ ವಸ್ತುಗಳಿಗೆ ಸುಂಕದ ಬಿಸಿ ತಟ್ಟಿದೆ. (ಏಜೆನ್ಸೀಸ್)