

ಪಾಟ್ನಾ; ವಿಧಾನಸಭಾ ಚುನಾವಣೆಗೂ ಮುನ್ನ ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಚುನಾವಣಾ ಆಯೋಗವು ಇಂದು (ಸೆ.30) ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಸಮಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಪ್ರಕಟಿಸಲಾಗಿದೆ.
ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಭೌತಿಕ ಪ್ರತಿಗಳನ್ನು ಕಳುಹಿಸಲಾಗುವುದು ಮತ್ತು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಗೆ ಡಿಜಿಟಲ್ ಪ್ರತಿಗಳನ್ನು ಒದಗಿಸಲಾಗುವುದು ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿ ತಿಳಿಸಿದೆ. 2025 ರ ಆಗಸ್ಟ್ನಲ್ಲಿ ಪ್ರಕಟವಾದ ಕರಡು ಪಟ್ಟಿಯಲ್ಲಿ, ಸಲ್ಲಿಸಿದ ಎಣಿಕೆ ನಮೂನೆಗಳ ಆಧಾರದ ಮೇಲೆ 7.24 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿ ಮಾಡಲಾಗಿತ್ತು. ಆದರೆ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಹಾರದಲ್ಲಿ 7.89 ಕೋಟಿ ನೋಂದಾಯಿತ ಮತದಾರರಿದ್ದರು. ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ, ಸುಮಾರು 65 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ ಎನ್ನಲಾಗಿತ್ತು. ಇದರಲ್ಲಿ ಮೃತ ಮತದಾರರು, ವಾಸಸ್ಥಳ ಬದಲಾಯಿಸಿದವರು ಅಥವಾ ನಕಲಿ ಹೆಸರಿನವರು ಸಹ ಸೇರಿದ್ದರು.
ಈ ಹಿನ್ನೆಲೆ, 16.59 ಲಕ್ಷ ಅರ್ಹ ನಾಗರಿಕರು ತಮ್ಮ ಹೆಸರುಗಳನ್ನು ಸೇರಿಸಲು ಕೋರಿ ನಮೂನೆ-6 ಅನ್ನು ಸಲ್ಲಿಸಿದರು. ಚುನಾವಣಾ ಆಯೋಗದ ಪ್ರಕಾರ, 36,000 ಕ್ಕೂ ಹೆಚ್ಚು ಮತದಾರರು ತಮ್ಮ ಹೆಸರುಗಳನ್ನು ಸೇರಿಸಲು ಅರ್ಜಿ ಸಲ್ಲಿಸಿದರೆ, 2.17 ಲಕ್ಷ ಮತದಾರರು ಹೆಸರು ಅಳಿಸಲು ಕೋರಿಕೊಂಡಿದ್ದಾರೆ ಎನ್ನಲಾಗಿತ್ತು. ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ಸುಮಾರು 3 ಲಕ್ಷ ಮತದಾರರಿಗೆ ನೋಟಿಸ್ ಕಳುಹಿಸಲಾಗಿದೆ. ಈ ಎಲ್ಲಾ ಬದಲಾವಣೆಗಳನ್ನು ಉಲ್ಲೇಖಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. SIR ಪ್ರಕ್ರಿಯೆಯ ಸಮಯದಲ್ಲಿ ಮರಣ ಹೊಂದಿದ, ವರ್ಗಾಯಿಸಲಾದ ಎಲ್ಲಾ ನಮೂದುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್ 22, 2025ರವರೆಗೆ ಕೊನೆಗೊಳ್ಳಲಿದ್ದು, ಆ ದಿನಾಂಕದ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಸಮಿತಿಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಚುನಾವಣೆಯು ಎನ್‌ಡಿಎ ಮತ್ತು ವಿರೋಧ ಪಕ್ಷದ ನಡುವೆ ನಡೆಯಲಿದೆ. ಇನ್ನು ಬಿಜೆಪಿ, ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮತ್ತೊಂದು ಅವಧಿಕೆ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದೆ. ಪ್ರಸ್ತುತ 243 ಸದಸ್ಯ ಬಲದ ವಿಧಾನಸಭೆಯಲ್ಲಿ, ಎನ್‌ಡಿಎ 131 ಸದಸ್ಯರೊಂದಿಗೆ ಬಹುಮತವನ್ನು ಹೊಂದಿದೆ. ಬಿಜೆಪಿ 80, ಜೆಡಿ(ಯು) 45, ಹಿಂದೂಸ್ತಾನಿ ಅವಾಮ್ ಮೋರ್ಚಾ 4, ಮತ್ತು 2 ಸ್ವತಂತ್ರ ಶಾಸಕರ ಬೆಂಬಲವಿದೆ. ಇಂಡಿಯಾ ಬ್ಲಾಕ್ 111 ಶಾಸಕರನ್ನು ಹೊಂದಿದ್ದು, ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಶಾಸಕರನ್ನು ಹೊಂದಿದೆ.
(ಏಜೆನ್ಸೀಸ್)