

ವಾಷಿಂಗ್ಟನ್: ಅಮೆರಿಕ ಶೀಘ್ರವೇ ಭಾರತದೊಂದಿಗೆ ‘ಅತಿ ದೊಡ್ಡ’ ವಾಣಿಜ್ಯ ಒಡಂಬಡಿಕೆಯನ್ನು ಮಾಡಿಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಭಯ ದೇಶಗಳ ನಡುವೆ ದೀರ್ಘ ಸಮಯದಿಂದ ಕಾಯುತ್ತಿರುವ ವಾಣಿಜ್ಯ ಕರಾರಿನ ಮಾತುಕತೆಗಳಲ್ಲಿ ಮಹತ್ವದ ಮುನ್ನಡೆಯಾಗಿರುವ ಸುಳಿವನ್ನು ಟ್ರಂಪ್ ಈ ಮೂಲಕ ನೀಡಿದ್ದಾರೆ. ಈ ಒಡಂಬಡಿಕೆಯಿಂದ ಅಮೆರಿಕದ ವ್ಯವಹಾರಗಳಿಗೆ ಭಾರತ ಮುಕ್ತವಾಗಲಿದೆ ಎಂದು ತೆರಿಗೆ ಮತ್ತು ವೆಚ್ಚ ಕಡಿತಗಳ ಕಾನೂನು ಅಂಗೀಕಾರ ಸಂಬಂಧ ಶ್ವೇತಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದರು. ಪ್ರಮುಖ ವಾಣಿಜ್ಯ ಒಪ್ಪಂದ ಏರ್ಪಡುವ ವಿಚಾರವನ್ನು ಪ್ರಕಟಿಸಿದರು.
ಚೀನಾದೊಂದಿಗಿನ ಒಡಂಬಡಿಕೆ ಮೂಲಕ ಚೀನಾವನ್ನು ಅಮೆರಿಕ ವ್ಯವಹಾರಗಳಿಗೆ ಮುಕ್ತಗೊಳಿಸಲಾಗುತ್ತದೆ. ಹಿಂದೆ ಯಾವತ್ತೂ ಸಾಧ್ಯವಾಗದ ವಿಚಾರಗಳು ನಡೆಯುತ್ತಿವೆ. ಪ್ರತಿಯೊಂದು ದೇಶದೊಂದಿಗಿನ ಸಂಬಂಧ ಚೆನ್ನಾಗಿದೆ ಎಂದು ಟ್ರಂಪ್ ಹೇಳಿದರು.
‘ಪ್ರತಿಯೊಂದು ದೇಶವೂ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ. ಅದಕ್ಕಾಗಿ ತಮ್ಮ ಆಡಳಿತದ ಅಧಿಕಾರಿಗಳು ಸಮಯ ಮೀರಿ ಕೆಲಸ ಮಾಡುತ್ತಿದ್ದಾರೆ’ ಎಂದು ಟ್ರಂಪ್ ಹೇಳಿಕೊಂಡರು. ಅಮೆರಿಕದ ಜತೆ ವ್ಯಾಪಾರ ವಹಿವಾಟು ನಡೆಸಲು ಯಾವುದೇ ದೇಶಕ್ಕೆ ಇಷ್ಟವಿದೆಯೇ ಎಂಬುದಾಗಿ ಕೆಲವು ತಿಂಗಳ ಹಿಂದೆ ಮಾಧ್ಯಮದವರು ಪ್ರಶ್ನಿಸಿದ್ದನ್ನು ನೆನಪಿಸಿದ ಟ್ರಂಪ್, ‘ಚೀನಾದೊಂದಿಗೆ ನಿನ್ನೆಯಷ್ಟೇ ಒಡಂಬಡಿಕೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು. ಆದರೆ ಚೀನಾದೊಂದಿಗೆ ಸಹಿ ಹಾಕಲಾದ ಕರಾರಿನ ಕುರಿತು ಅವರು ಹೆಚ್ಚಿನ ವಿವರಣೆ ನೀಡಲಿಲ್ಲ.
ವಾಣಿಜ್ಯ ಒಡಂಬಡಿಕೆಯ ಮುಂದಿನ ಸುತ್ತಿನ ಮಾತುಕತೆಗಾಗಿ ಮುಖ್ಯ ಸಂಧಾನಕಾರ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ನಿಯೋಗವೊಂದು ಗುರುವಾರ ವಾಷಿಂಗ್ಟನ್ಗೆ ಆಗಮಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಭಾರತ ಮತ್ತು ಅಮೆರಿಕ ಜುಲೈ 9ರೊಳಗೆ ಒಪ್ಪಂದ ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ. ಏಪ್ರಿಲ್ 2ರಂದು ಪರಸ್ಪರ ಸುಂಕ ಘೋಷಣೆ ಮಾಡಿದ್ದ ಟ್ರಂಪ್, ಅದನ್ನು ಜುಲೈ 9ರವರೆಗೆ ತಡೆ ಹಿಡಿದಿದ್ದಾರೆ.