

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10 ಭಾನುವಾರ (ಅ.08) ದಿಂದ ಆರಂಭವಾಗಿದ್ದು, ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗಿರುವುದನ್ನು ತೋರಿಸಲಾಗಿದೆ. ಇದು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಭಾನುವಾರದಿಂದ ಆರಂಭವಾದ ಶೋನಲ್ಲಿ ಈಗಾಗಲೇ ಹಲವಾರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ಇಂದು ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ದೊಡ್ಮನೆ ಸೇರಿರುವುದು ಕೊಂಚ ಕುತೂಹಲ ಹುಟ್ಟುಹಾಕಿದೆ.
ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಶೋನಲ್ಲಿ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದನ್ನು ತೋರಿಸಲಾಗುತ್ತದೆ. ಅಂದಹಾಗೆ ಪ್ರದೀಪ್ ಶಾಸಕರಾಗಿರುವುದರಿಂದ ಕೆಲವೇ ದಿನಗಳವರೆಗೆ ಅತಿಥಿಯಾಗಿ ಅವರು ದೊಡ್ಮನೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.
ಪ್ರೋಮೋದಲ್ಲಿ ತೋರಿಸಿರುವ ಮಾಹಿತಿಯ ಪ್ರಕಾರ, "ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು, ಪ್ರತಿಸ್ಪರ್ಧಿಗಳು ಗೆಲ್ಲೋಕೆ" ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಪ್ರದೀಪ್ ಈಶ್ವರ್ ಎಂಟ್ರಿಗೆ ಸಂತು "ನಾವು ಎಂಎಲ್‌ಎ ಜೊತೆ ಸ್ಪರ್ಧೆ ಮಾಡ್ತಿದ್ದೇವೆ, ಇದು ತಮಾಷೆ ವಿಷಯವೇ ಅಲ್ಲ" ಎಂದು ಹೇಳಿದ್ದಾರೆ. "ನಾನು ಎಂಟ್ರಿ ಅಂತಲೇ ಅಂತ ಅಂದುಕೊಂಡಿರಲಿಲ್ಲ" ಅಂತ ಸಿರಿ ಅವರು ಹೇಳುತ್ತಿರುವುದನ್ನು ಕಾಣಬಹುದು.
ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು. ಸದ್ಯ ಪ್ರದೀಪ್ ಅವರ ಎಂಟ್ರಿಗೆ ಬಿಗ್ ಬಾಸ್ ಮನೆಮಂದಿ ಮಾತ್ರವಲ್ಲದೆ, ಪ್ರೇಕ್ಷಕರು ಸರ್ಪ್ರೈಸ್ ಆಗಿದ್ದಾರೆ. ಜತೆಗೆ ವೀಕ್ಷರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.