ಬಿಗ್ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ, ರಿಯಾಲಿಟಿ ಶೋ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಬಿಗ್ಬಾಸ್ಗೂ ಮುನ್ನವೇ ಅವರು ನಟಿಸಿದ್ದ ಕೆಲ ಚಿತ್ರಗಳು ಇತ್ತೀಚೆಗೆ ತೆರೆಗೆ ಬಂದಿದ್ದು, ಅವುಗಳ ಪ್ರಚಾರದಲ್ಲಿ ಬಿಜಿಯಾಗಿದ್ದ ನಟ, ಅದರ ಜತೆಜತೆಗೆ ಹೊಸ ಹೊಸ ಕಥೆಗಳನ್ನೂ ಕೇಳುತ್ತಿದ್ದರು. ಅವರು ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇತ್ತಾದರೂ, ಯಾವ ಸಿನಿಮಾ? ನಿರ್ದೇಶಕ ಯಾರು? ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಆ ಪ್ರಶ್ನೆಗೆ ಉತ್ತರ ದೊರೆತಿದ್ದು, ಇದೇ ಜೂ. 21ರ ಗಿಲ್ಲಿ ನಟನ ಹುಟ್ಟುಹಬ್ಬದಂದು ಉಳಿದೆಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ. ಅರ್ಥಾತ್ ಅಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಅಂದೇ ಶೀರ್ಷಿಕೆ? ನಾಯಕಿ? ತಾರಾಗಣ? ತಂತ್ರಜ್ಞರ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಅಂದಹಾಗೆ "ಡಬಲ್ ಇಂಜಿನ್', "ಬಾಂಬೆ ಮಿಠಾಯಿ', "ಫಾರೆಸ್ಟ್' ಸೇರಿ ಹಾಸ್ಯ ಪ್ರಧಾನ ಚಿತ್ರಗಳ ಮೂಲಕವೇ ಜನಪ್ರಿಯರಾಗಿರುವ ನಿರ್ದೇಶಕ ಚಂದ್ರಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್&ಕಟ್ ಹೇಳಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಿರ್ಮಾಪಕ, ವಿತರಕ ವೆಂಕಟ್ ಕೆ. ನಾರಾಯಣ್ ಅರ್ಪಿಸುತ್ತಿದ್ದಾರೆ.