

ಶಿವಮೊಗ್ಗ: ಸಾಗರದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಶಿವಮೊಗ್ಗದ ಎಸ್ಪಿ ಜಿ.ಕೆ.ಮಿಥುನ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಗರದಲ್ಲಿ ನಡೆದಿರುವ ಭಜರಂಗದಳದ ಕಾರ್ಯಕರ್ತನ ಮೇಲೆ ದಾಳಿ ವೈಯಕ್ತಿಕವಾದುದು. ಬಜರಂಗದಳ ಕಾರ್ಯಕರ್ತ ಸುನಿಲ್ ಕಳೆದ ನಾಲ್ಕೈದು ತಿಂಗಳಿನಿಂದ ಸಮೀರ್ ಸಹೋದರಿಗೆ ಚುಡಾಯಿಸುತ್ತಿದ್ದ. ಈ ಸಂಬಂಧ ಸಮೀರ್, ಸುನಿಲ್ಗೆ ವಾರ್ನ್ ಮಾಡಿದ್ದ.
ಭಜರಂಗದಳ ಕಾರ್ಯಕರ್ತ ಸುನಿಲ್ ಈ ಹಿಂದೆ ಸಮೀರ್ ತಂಗಿಯ ಫೋನ್ ನಂಬರ್ ಕೇಳಿದ್ದ. ಇದು ಸಮೀರ್ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ 2-3 ಬಾರಿ ಸಮೀರ್ ಎಚ್ಚರಿಕೆಯನ್ನೂ ನೀಡಿದ್ದ. ದಾಳಿ ನಡೆದ ದಿನವೂ ಸುನಿಲ್ ಮತ್ತು ಸಮೀರ್ ಬಯ್ದಾಡಿಕೊಂಡಿದ್ದಾರೆ.
ಸಮೀರ್ ಮೇಕೆಗೆ ಹುಲ್ಲು ತರಲು ಹೊರಟಿದ್ದ. ಹೀಗಾಗಿ ಮಚ್ಚು ಇಟ್ಟುಕೊಂಡಿದ್ದ. ಇದೇ ಮಚ್ಚಿನಿಂದ ಸುನಿಲ್ ಮೇಲೆ ಹಲ್ಲೆಯಾಗಿದೆ ಎಂದು ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಮಾಹಿತಿ ನೀಡಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬೇರೆ ಯಾರಾದರೂ ಪ್ರಕರಣದಲ್ಲಿ ಇದ್ದಾರೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸಿರುವ ಕಾಲ್ ರೆಕಾರ್ಡ್ಸ್ ಲಭ್ಯವಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಹೇಳಿದ್ದಾರೆ.
ಸಾಗರ ನಗರದ ಬಿ.ಎಚ್.ರಸ್ತೆಯ ಬಸ್ ನಿಲ್ದಾಣ ಬಳಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಮಚ್ಚು ಬೀಸಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಸುನೀಲ್ ಪಾರಾಗಿದ್ದ. ದಾಳಿಗೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.