ಉದ್ಯಮಿ ಸುಶೀಲ್ ಮಂತ್ರಿಗೆ ಬಿಗ್  ರಿಲೀಫ್  : ಲುಕ್‌ಔಟ್ ನೋಟಿಸ್ ಅಮಾನತು

highcourt
Published on

ಬೆಂಗಳೂರು: ಮಂತ್ರಿ ಡೆವಲಪರ್ಸ್ ಮುಖ್ಯಸ್ಥ ಸುಶೀಲ್ ಮಂತ್ರಿ, ಪತ್ನಿ ಸ್ನೇಹಲ್ ಹಾಗೂ ಪುತ್ರ ಪ್ರತೀಕ್ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಅನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.

ಕೇಂದ್ರ ಗೃಹ ಇಲಾಖೆಯ ವಲಸೆ ವಿಭಾಗದ ಅಧಿಕಾರಿಗಳು ಹೊರಡಿಸಿರುವ ಲುಕ್‌ಔಟ್ ನೋಟಿಸ್ ಪ್ರಶ್ನಿಸಿ ಸುಶೀಲ್ ಮಂತ್ರಿ, ಸ್ನೇಹಲ್ ಮತ್ತು ಪ್ರತೀಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಸುಶೀಲ್ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಈಗಾಗಲೇ ಹತ್ತು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಎಲ್ಲ ಪ್ರಕರಣಗಳಿಗೂ ಹೈಕೋರ್ಟ್ ತಡೆ ನೀಡಿದ್ದು ಅರ್ಜಿದಾರರ ವಿರುದ್ಧದ ಎಲ್‌ಒಸಿ ಹಿಂಪಡೆಯಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು

.

ಅರ್ಜಿದಾರರ ವಿರುದ್ಧ ಹಣಕಾಸು ದುರ್ಬಳಕೆಗೆ ಸಂಬಂಧಿಸಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ವಿದೇಶಕ್ಕೆ ತೆರಳಿದರೆ ವಾಪಸಾಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಎಲ್‌ಒಸಿ ಹೊರಡಿಸಲು ಮನವಿ ಮಾಡಲಾಗಿತ್ತು. ಈಗ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್ ತಡೆ ವಿಧಿಸಿದೆ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ ಸುತ್ತೋಲೆಯನ್ನು ಅಮಾನತ್ತಿನಲ್ಲಿಟ್ಟು ಆದೇಶಿಸಿತು.ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೂ ತಡೆ ನೀಡಿ ಆದೇಶಿಸಿದೆ.

ಏನಿದು ಪ್ರಕರಣ:

ಹಣ ಪಡೆದ ಬಳಿಕ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸದೆ ಮತ್ತು ಮನೆ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಮಂತ್ರಿ ಡೆವಲಪರ್ಸ್ ವಿರುದ್ಧ ಮುಂಗಡ ಪಾವತಿ ಮಾಡಿದ್ದ ಗ್ರಾಹಕರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರ ಮನವಿಯ ಮೇರೆಗೆ ಕೇಂದ್ರ ಗೃಹ ಇಲಾಖೆಯು ಅರ್ಜಿದಾರರ ವಿರುದ್ಧ ಲುಕ್‌ಔಟ್ ಸುತ್ತೋಲೆಯನ್ನು ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net