

| ಹೀರಾನಾಯ್ಕ ಟಿ. ವಿಜಯಪುರ
ಕರೊನಾ ಲಾಕ್ಡೌನ್ ಬಳಿಕ ನೆರೆಯ ರಾಜ್ಯಗಳಲ್ಲಿ ಕೆಲಸ ಕಳೆದುಕೊಂಡು ತವರಿಗೆ ಮರಳಿದ್ದ ಸಾವಿರಾರು ವಲಸೆ ಕಾರ್ವಿುಕರು ಇದೀಗ ಮತ್ತೆ ಉದ್ಯೋಗ ಅರಸಿ ಗುಳೆ ಹೊರಟಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸಿಗದ ಪರಿಣಾಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ಜನರು ಮಹಾರಾಷ್ಟ್ರ ಹಾಗೂ ಗೋವಾದತ್ತ ಹೆಜ್ಜೆ ಹಾಕಿದ್ದಾರೆ. ಗುಳೆ ಹೋಗುವವರ ಸಂಖ್ಯೆಯಲ್ಲಿ ವಿಜಯಪುರ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಕಾರ್ವಿುಕರು ಕೂಲಿಗಾಗಿ ಗುಳೆ ಹೋಗುತ್ತಾರೆ.
ತಾಂಡಾಗಳಲ್ಲೇ ಹೆಚ್ಚು: ವಿಜಯಪುರ ಜಿಲ್ಲೆಯ ಮದಭಾವಿ ತಾಂಡಾ, ಹಡಗಲಿ, ನವಲಗಿ, ಕೋಳೂರ, ಹಂಜಗಿ, ಕೇಸರಾಳ, ಹಡಲಸಂಗ, ಬೂದಿಹಾಳ, ಬರಡೋಲ, ಖಿರೂನ ತಾಂಡಾ, ಅರಕೇರಿ, ಭೂತನಾಳ ತಾಂಡಾಗಳ ಜನರು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ತಾಂಡಾದ ಜನರು ಹೆಚ್ಚಾಗಿ ಮಹಾರಾಷ್ಟ್ರದ ಸಾಂಗ್ಲಿ, ಜತ್ತ್, ಮೀರಜ್, ಸೊಲ್ಲಾಪುರ ಹಾಗೂ ಗೋವಾದ ಕಡೆಗೆ ದುಡಿಯಲು ಹೋಗುತ್ತಾರೆ.
ಕುಟುಂಬ ನಿರ್ವಹಣೆ ಕಷ್ಟ: ಲಾಕ್ಡೌನ್ನಿಂದ ಕಳೆದ 10 ತಿಂಗಳಿಂದ ಕೆಲಸ ಇಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಇದ ರಿಂದಾಗಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸ್ಥಳೀಯವಾಗಿ ಉದ್ಯೋಗ ಇಲ್ಲ. ಕೆಲಸ ಬೇಕೆಂದರೆ ಮತ್ತೆ ಮಹಾರಾಷ್ಟ್ರ, ಗೋವಾಕ್ಕೆ ಹೋಗಬೇಕು. ಹೊರಗೆ ಕೂಲಿ ಕೆಲಸಕ್ಕೆ ಹೋದರೆ 500-800 ರೂ. ವರೆಗೆ ನೀಡುತ್ತಾರೆ. ಹಾಗಾಗಿ ಕೆಲಸಕ್ಕೆ ಕರೆದುಕೊಂಡು ಹೋಗುವವರ ಬಳಿ ಮುಂಗಡವಾಗಿ ಹಣ ಪಡೆದು ಕೂಲಿಗಾಗಿ ವಲಸೆ ಹೊರಟಿದ್ದೇವೆ ಎಂದು ಮುಖಂಡ ದಾಮು ಚವ್ಹಾಣ ತಿಳಿಸುತ್ತಾರೆ.
ಗುಳೆ ಹೋಗುವುದನ್ನು ತಪ್ಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಗುಡಿ ಕೈಗಾರಿಕೆ ನಿರ್ವಣಕ್ಕಾಗಿ ‘ಪೈಲಟ್ ಪ್ರಾಜೆಕ್ಟ್’ ಜಾರಿಗೆ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದರು. ಪ್ರಸಕ್ತ ಬಜೆಟ್ನಲ್ಲಿ ಈ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು. | ದೇವಾನಂದ ಚವ್ಹಾಣ ನಾಗಠಾಣ ಶಾಸಕ
ಕೈ ಹಿಡಿಯದ ನರೇಗಾ
ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿಸಲಾಗುತ್ತಿದ್ದರೂ ಜನರಿಗೆ ಉಪಯೋಗವಾಗುತ್ತಿಲ್ಲ. ಯೋಜನೆಯಡಿ ಪ್ರತಿ ಕೂಲಿಯಾಳಿಗೆ 275 ರೂ. ನೀಡಲಾಗುತ್ತದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕೆಲಸ ನೀಡುವುದು ಸವಾಲಾಗಿದೆ. ಬಹುತೇಕ ಕಡೆಗಳಲ್ಲಿ ಹೊಲಗಳಲ್ಲಿ ಬದು ನಿರ್ವಣ, ಕೃಷಿ ಹೊಂಡ ನಿರ್ವಣ, ಕೆರೆ ಹೂಳೆತ್ತುವ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಗುಳೆಕಾರರು ದೂರುತ್ತಾರೆ.