

ಭಾರತದಿಂದ ಅಮೆರಿಕಕ್ಕೆ ಬರುವ ಎಲ್ಲ ಸರಕುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದಿನಿಂದಲೇ (ಆಗಸ್ಟ್ 1) ಜಾರಿಗೆ ಬರುವಂತೆ 25% ಸುಂಕ ಹೇರಿದ್ದಾರೆ ಮತ್ತು ಈ ಘೋಷಣೆಯ ವೇಳೆ ಟ್ರಂಪ್ ಬಳಸಿರುವ ಭಾಷೆ, ತೋರಿರುವ ಉದ್ಧಟತನದ ವರ್ತನೆ ಎಲ್ಲವನ್ನೂ ಅಂತಾರಾಷ್ಟ್ರೀಯ ಸಮುದಾಯ ಗಮನಿಸಿದೆ. ಭಾರತವನ್ನು ಟ್ರಂಪ್ ‘ಮೃತ ಆರ್ಥಿಕತೆ’ ಎಂದು ಕರೆದಿರುವುದು ಮತ್ತು ರಾಜಕೀಯ ಕಾರಣಕ್ಕಾಗಿ ಭಾರತದ ವಿರೋಧ ಪಕ್ಷಗಳು ಆ ಹೇಳಿಕೆಯನ್ನು ಸಮರ್ಥಿಸಿರುವುದು ದುರದೃಷ್ಟಕರ.
ಕರೊನಾ ಸಾಂಕ್ರಾಮಿಕದಂಥ ಕ್ಲಿಷ್ಟಕರ ಸನ್ನಿವೇಶದಲ್ಲೂ ಜಗತ್ತಿನ ಬಲಾಢ್ಯ ಆರ್ಥಿಕ ಶಕ್ತಿಗಳು ಸಂಕಷ್ಟ ಎದುರಿಸಿದವೆ ಹೊರತು ಭಾರತದ ಆರ್ಥಿಕತೆ ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡಿತ್ತು. ದೇಶದಲ್ಲಿ ಹಣದುಬ್ಬರವು ಪ್ರಸ್ತುತ 6 ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಮಾತ್ರವಲ್ಲ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಶೇಕಡ 6.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಜನರು ಸರಕು ಮತ್ತು ಸೇವೆಗಳನ್ನು ಪಡೆದುಕೊಳ್ಳುವುದರ ಮೇಲೆ ವ್ಯಯಿಸುವ ಪ್ರಮಾಣ ಹೆಚ್ಚಾಗಿದೆ ಎಂದಿದೆ.
ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಒಂದಿಷ್ಟು ದಂಡವನ್ನೂ ತೆರಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಯುರೋಪಿಯನ್ ಒಕ್ಕೂಟ (ಇಯು) ಮತ್ತು ಅಮೆರಿಕ ಭಾರತವನ್ನು ಆರ್ಥಿಕ ರಂಗದಲ್ಲಿ ಕಟ್ಟಿಹಾಕಲು ಹವಣಿಸುತ್ತಿದ್ದು, ಆ ನಿಟ್ಟಿನಲ್ಲಿ ವಿವೇಚನಾರಹಿತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಷ್ಟಕ್ಕೂ, ಭಾರತ ಯಾವ ರಾಷ್ಟ್ರದಿಂದ ಸರಕುಗಳನ್ನು ಖರೀದಿಸಬೇಕು, ಯಾರೊಂದಿಗೆ ಖರೀದಿಸಬಾರದು ಎಂದು ನಿರ್ಧರಿಸುವ ಅಥವಾ ಆ ಬಗೆಯ ಒತ್ತಡ ಹೇರುವ ಯಾವುದೇ ಹಕ್ಕು ಅಮೆರಿಕಕ್ಕೆ ಇಲ್ಲ. ಎಲ್ಲ ರಂಗಗಳಲ್ಲೂ ಸುಧಾರಣೆಯ ಮಹತ್ವದ ಹೆಜ್ಜೆಗಳನ್ನು ಇರಿಸಿರುವ ಭಾರತ ವ್ಯಾಪಾರ, ಹೂಡಿಕೆ ರಂಗದಲ್ಲಿ ಮಹತ್ವದ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಮಾತ್ರವಲ್ಲ, ಅಮೆರಿಕದಲ್ಲೂ ಅಲ್ಲಿನ ಬೆಳವಣಿಗೆಗೆ ಭಾರತೀಯ ಮೂಲದವರು ಮಹತ್ವದ ಕೊಡುಗೆ ನೀಡುತ್ತಿರುವುದನ್ನು ಟ್ರಂಪ್ ಮರೆತಂತಿದೆ.
ಅಮೆರಿಕದ್ದು ಯಾವಾಗಲೂ ದ್ವಂದ್ವ ನೀತಿ. ತನ್ನ ಲಾಭವನ್ನು ಮಾತ್ರ ಕಾಣುವ ಅದು, ಲಾಭ ಇಲ್ಲವೆಂದಾದರೆ ವಿರೋಧಿಸಲು ಆರಂಭಿಸುತ್ತದೆ. ಈ ವಿಷಯದಲ್ಲಿ ಟ್ರಂಪ್ ಸಂಯಮದ ಗೆರೆಯನ್ನು ದಾಟಿದ್ದಾರೆ. ‘ಭಾರತೀಯರನ್ನು ನೇಮಿಸಿಕೊಳ್ಳಬೇಡಿ’ ಎಂದು ಕೆಲ ದಿನಗಳ ಹಿಂದೆಯಷ್ಟೇ ಅವರು ಐಟಿ ಕಂಪನಿಗಳಿಗೆ ಸೂಚಿಸಿದ್ದಾರೆ. ಅದಕ್ಕೂ ಮುನ್ನ ಆಪಲ್ ಕಂಪನಿಗೆ ಎಚ್ಚರಿಕೆ ನೀಡಿ, ಭಾರತದಲ್ಲಿ ಉತ್ಪಾದನೆ ಕೈಗೊಳ್ಳದಂತೆ ಹೇಳಿದ್ದರು. ‘ಅಮೆರಿಕ ಮೊದಲು’ ನೀತಿಯೆಂದರೆ ಇತರ ರಾಷ್ಟ್ರಗಳ ಸ್ನೇಹವನ್ನು ಕಳೆದುಕೊಳ್ಳುವಂಥದ್ದಲ್ಲ ಎಂಬ ಸಾಮಾನ್ಯ ವಿವೇಚನೆಯನ್ನು ಟ್ರಂಪ್ ಮರೆತಿದ್ದಾರೆ. ಅಷ್ಟಕ್ಕೂ ಭಾರತ ಈಗ ಜಾಗತಿಕ ಶಕ್ತಿಯಾಗಿದ್ದು, ಹೊರ ದೇಶಗಳಲ್ಲಿ ಹೊಸ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಇಂಥ ಗೊಡ್ಡು ಬೆದರಿಕೆ ಅಥವಾ ಬ್ಲಾ್ಯಕ್ವೆುೕಲ್ನಿಂದ ನಿಜವಾದ ನಿಷ್ಟ ಅಮೆರಿಕಕ್ಕೇ ಎಂಬ ವಾಸ್ತವವನ್ನು ಟ್ರಂಪ್ ಅರಿಯದಿದ್ದರೆ, ಉಭಯ ರಾಷ್ಟ್ರಗಳ ಬಾಂಧವ್ಯದಲ್ಲಿ ಹಿಂದಡಿ ಇಟ್ಟಂತಾಗುತ್ತದೆ.