

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್ ನಡುವೆ ಭಿನ್ನಾಭಿಪ್ರಾಯ ಮೂಡಿವೆ ಎಂಬ ಮಾಧ್ಯಮ ವರದಿಯೊಂದು ಡೆಮಾಕ್ರಟಿಕ್ ಪಕ್ಷ ಸಹಿತ ದೇಶದ ರಾಜಕೀಯ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಆದರೆ,ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕಮಲಾ ಮತ್ತು ಶ್ವೇತ ಭವನದ ಹಿರಿಯ ಅಧಿಕಾರಿಗಳು ಸ್ಪಷ್ಟನೆ ಕೊಡುವುದರೊಂದಿಗೆ ಸಂಬಂಧ ಹದಗೆಟ್ಟಿರುವ ಕುರಿತು ಹಬ್ಬಿದ ವದಂತಿಗಳಿಗೆ ತೆರೆ ಬಿದ್ದಿದೆ.
ಟ್ರಿಲಿಯನ್ ಡಾಲರ್ ಮೂಲಸೌಕರ್ಯ ಮಸೂದೆಗೆ ಸಂಬಂಧಿಸಿದಂತೆ ಉಭಯ ನಾಯಕರ ನಡುವೆ ಭಿನ್ನಮತ ಉಂಟಾಗಿದೆ ಎಂದು ಪ್ರಮುಖ ಟಿವಿ ವಾಹಿನಿಯೊಂದು ಸುದೀರ್ಘ ವರದಿ ಪ್ರಸಾರ ಮಾಡಿತ್ತು. ಇದರಿಂದ ಜಗತ್ತಿನ ವಿಶ್ವದ ದೊಡ್ಡಣನೆಂದು ಬೀಗುವ ಅಮೆರಿಕದಲ್ಲಿ ನಾಯಕತ್ವ ಬಿಕ್ಕಟ್ಟು ಉಂಟಾಗಿದೆ ಎಂಬ ಕಳವಳ ಸೃಷ್ಟಿಯಾಗಿತ್ತು. ಆದರೆ, ಬೈಡೆನ್ ಬೃಹತ್ ಮೊತ್ತದ ಮಸೂದೆಗೆ ಸಹಿ ಹಾಕುವುದಕ್ಕೆ ಮುಂಚೆ, ಆ ಕಾರ್ಯಭಾರ ವಹಿಸಿದ್ದಕ್ಕಾಗಿ ಬೈಡೆನ್ಗೆ ಹ್ಯಾರಿಸ್ ಧನ್ಯವಾದ ಹೇಳಿದ್ದು ಯಾವುದೇ ಸಮಸ್ಯೆಯಿಲ್ಲ ಎನ್ನುವುದರ ಸೂಚನೆಯಾಗಿದೆ. ಅಷ್ಟು ಮಾತ್ರವಲ್ಲದೆ, ಉಭಯ ನಾಯಕರು ಸುಮಾರು 800 ಅತಿಥಿಗಳ ಮುಂದೆ ಪರಸ್ಪರ ತಬ್ಬಿಕೊಂಡಿದ್ದು ಕೂಡ ಅವರ ಒಗ್ಗಟ್ಟಿನ ಪ್ರದರ್ಶನದ ದ್ಯೋತಕವಾಗಿತ್ತು. ಹ್ಯಾರಿಸ್ರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಡೆಮಾಕ್ರಟಿಕ್ ಪಕ್ಷ ಹೇಳಿದ್ದು ಉಪಾಧ್ಯಕ್ಷೆಗೆ ಸಂಪೂರ್ಣ ಬೆಂಬಲ ಘೋಷಿಸಿದೆ.
ಬಿರುಕಿನ ಸುದ್ದಿಯಿಂದ ರಿಪಬ್ಲಿಕನ್ ಪಕ್ಷದ ನಾಯಕರ ಮೊಗದಲ್ಲಿ ನಗು ಮೂಡಿತ್ತು. ಡೆಮಾಕ್ರಟಿಕ್ ಪಕ್ಷದಲ್ಲಿ ನಾಯಕತ್ವದ ಉತ್ತರಾಧಿಕಾರಿಯ ಕಲಹ ಶುರುವಾಗಿದೆ ಎಂದೇ ರಿಪಬ್ಲಿಕನ್ನರು ನಂಬಿದ್ದರು. ಆದರೆ, ಹ್ಯಾರಿಸ್ ಪ್ರಸ್ತುತ ಆಡಳಿತದ ಪ್ರಮುಖ ಭಾಗವಾಗಿದ್ದಾರೆ ಎಂದು ಸೋಮವಾರ ಹೇಳಿರುವ ಶ್ವೇತಭವನ ವಿವಾದಕ್ಕೆ ಕೊನೆ ಹಾಡಿದೆ.
ತೈವಾನ್ ಸ್ವತಂತ್ರ್ಯದ ವಿಚಾರವಾಗಿ ಚೀನಾ ಮತ್ತು ಅಮೆರಿಕದ ನಡುವಣ ಸಂಘರ್ಷ ತಾರಕಕ್ಕೇರುವ ಲಕ್ಷಣ ಗೋಚರಿಸುತ್ತಿದೆ. ತೈವಾನ್ ಸ್ವಾತಂತ್ರ್ಯಕ್ಕೆ ಪ್ರೋತ್ಸಾಹಿಸುವುದು ‘ಬೆಂಕಿಯೊಂದಿಗೆ ಸರಸವಾಡಿದಂತೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅಮೆರಿಕ ಅಧ್ಯಕ್ಷ ಜೋ ಬೈಡೆನ್ರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ‘ಬೆಂಕಿಯೊಂದಿಗೆ ಆಡುವವರು ಸುಟ್ಟು ಹೋಗುತ್ತಾರೆ’ ಎಂದು ಕಟು ಮಾತು ಬಳಸಿರುವ ಜಿನ್ಪಿಂಗ್ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ಪರಸ್ಪರ ಪ್ರತಿಸ್ಪರ್ಧಿ ಸೂಪರ್ ಪವರ್ಗಳ ನಡುವಿನ ಸಂಘರ್ಷ ನಿವಾರಿಸಿ ಉತ್ತಮ ಬಾಂಧವ್ಯ ರೂಪಿಸಲು ಉಭಯ ನಾಯಕರ ನಡುವೆ ನಡೆದ ವರ್ಚುವಲ್ ಶೃಂಗ ಸಭೆಯಲ್ಲೇ ಎಚ್ಚರಿಕೆ ನೀಡಲಾಗಿದೆ.
ವಿಡಿಯೋ ಲಿಂಕ್ ಶೃಂಗ ಸಭೆ ನಿರೀಕ್ಷೆಗಿಂತ ಹೆಚ್ಚು ದೀರ್ಘ ಕಾಲ, ಅಂದರೆ ಸುಮಾರು ಮೂರೂವರೆ ಗಂಟೆ ಮುಂದುವರಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಸಮಾಲೋಚನೆಯು ಗೌರವಪೂರ್ಣ ಹಾಗೂ ಪ್ರಾಮಾಣಿಕವಾಗಿತ್ತು’ ಎಂದು ಅಮೆರಿಕದ ಒಬ್ಬ ಅಧಿಕಾರಿ ಹೇಳಿದ್ದಾರೆ. ‘ಚೀನಾವನ್ನು ನಿಯಂತ್ರಿಸಲು ಅಮೆರಿಕದ ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದು ಅಪಾಯಕಾರಿ ಪ್ರವೃತ್ತಿ’ ಎಂದು ಅಧ್ಯಕ್ಷ ಜಿನ್ಪಿಂಗ್ ಹೇಳಿದರೆಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.