

ಬಿಡದಿ : ಪ್ರಾಂಶುಪಾಲರ ಹುದ್ದೆ ಜವಾಬ್ದಾರಿಯುತ ಸ್ಥಾನವಾಗಿದ್ದು, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದರೆ ಆಡಳಿತಾತ್ಮಕವಾಗಿ ಯಶಸ್ಸು ಕಾಣಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುಸಿದ್ದಯ್ಯ ಅಭಿಪ್ರಾಯಪಟ್ಟರು.
ಬಿಡದಿ ಹೋಬಳಿ ತಿಮ್ಮೇಗೌಡನದೊಡ್ಡಿ ಬಳಿಯ ಅಮೃತಾ ಇನ್‌ಸ್ಟಿಟ್ಯೂಟ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಂಶುಪಾಲರ ಆಡಳಿತಾತ್ಮಕ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಶಿಸ್ತು ಕಾಪಾಡಿ ಕೊಂಡರೆ ಜವಾಬ್ದಾರಿ ಯನ್ನು ಸಮರ್ಪಕವಾಗಿ ನಿಭಾಯಿಸಬಹುದು. ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಆರ್ಥಿಕ ವರ್ಷದಲ್ಲಿ ನಡೆದ ವಿವಿಧ ತರಬೇತಿ ಕಾರ್ಯಾಗಾರಗಳು ಯಶಸ್ವಿಯಾಗಿದೆ. ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ 25ನೇ ಸ್ಥಾನದಲ್ಲಿದೆ. ಕರೊನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲದ ಕಾರಣ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ಅಂತಹವರಿಗೆ ದಾನಿಗಳ ಸಹಕಾರ ಪಡೆದು 6 ವಿಷಯಗಳ ಪಠ್ಯಕ್ರಮವನ್ನು ಜೆರಾಕ್ಸ್ ಮಾಡಿಸಿಕೊಟ್ಟು, ಉತ್ತಮ ಫಲಿತಾಂಶ ತಂದು ಕೊಡುವತ್ತ ಪ್ರಾಂಶುಪಾಲರು ಶ್ರಮಿಸಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಉಪನಿರ್ದೇಶಕ ಎಚ್.ಡಿ.ಲಿಂಗರಾಜು, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಎಂ.ಎಸ್. ನಟರಾಜು ಪ್ರಾಂಶುಪಾಲರ ಆಡಳಿತಾತ್ಮಕ ವಿಷಯವಾಗಿ ವಿಷಯ ಮಂಡನೆ ಮಾಡಿದರು. ಕಾರ್ಯಾಗಾರ ಸಂಯೋಜಕ ಜಿ. ಶಿವಣ್ಣ, ಪ್ರಾಧ್ಯಾಪಕ ಡಾ. ಎಂ.ಕೆ. ಪುರುಷೋತ್ತಮ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ನಾರಾಯಣಪ್ಪ ಮಾತನಾಡಿದರು.
ಬಿವಿವಿ ಸಂಘದ ಆಡಳಿತ ಮಂಡಳಿ ಸದಸ್ಯ ಬಸವರಾಜು ಕೆಂಗಾಪುರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರೇಗೌಡ, ಖಜಾಂಚಿ ಕೃಷ್ಣ.ಎಂ, ಪ್ರಾಂಶುಪಾಲರಾದ ಡಾ. ಬಿ.ಆರ್. ದಿವಾಕರ, ಎಂ.ಸಿ. ಗೋವಿಂದಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ನಾಲ್ಕು ತಾಲೂಕುಗಳ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ಇದ್ದರು.
ನೈತಿಕತೆ ಕಸಿಯುವ ಕೆಲಸ : ಕಾರ್ಯಾಗಾರ ಉದ್ಘಾಟಿಸಿದ ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಸೈನ್ಸ್‌ನ ಪ್ರಾಂಶುಪಾಲ ಡಾ. ಸಿ.ಬಿ. ಶಿವಯೋಗಿಮಠ ಮಾತನಾಡಿ, ಪ್ರಾಂಶುಪಾಲರಲ್ಲಿನ ನೈತಿಕತೆಯನ್ನು ಕಸಿಯುವ ಕೆಲಸ ನಡೆಯುತ್ತಿದೆ. ಆದಕ್ಕೆ ಕುಗ್ಗದೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂಬ ದೃಢ ನಿರ್ಧಾರ ಇರಲಿ.
ಅಲ್ಲದೆ ನಡೆ ನುಡಿಯಲ್ಲಿ ವ್ಯತ್ಯಾಸವಿರದೆ, ಕರ್ತವ್ಯದಲ್ಲಿ ಪಾರದರ್ಶಕತೆ ಹೊಂದಿ ಇತರರಿಗೆ ಮಾದರಿಯಾಗಿರುವಂತಿರಲಿ ಎಂದರು. ಸಮಾಜದ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಕಂಡರೂ, ಜನರು ಶಿಕ್ಷಣ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಹಾಗಾಗಿ ಆಡಳಿತಾತ್ಮಕ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಂಡು ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಿ ಎಂದು ಶಿವಯೋಗಿಮಠ ಕಿವಿಮಾತು ಹೇಳಿದರು.