

ಬೆಂಗಳೂರು: ಹಿಂದಿನಿಂದ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಪ್ರಕರಣ ಕೆ.ಆರ್.ಪುರ ಸಮೀಪದ ಹೂಡಿ ಸೇತುವೆ ಮೇಲೆ ನಡೆದಿದೆ.
ಹೂಡಿ ನಿವಾಸಿ ಸುರೇಶ್ (೩೪) ಮೃತ ಸವಾರ. ಪಾದಚಾರಿ ವ್ಯಾಪಾರಿಯಾದ ಸುರೇಶ್ ಶುಕ್ರವಾರ ವ್ಯಾಪಾರ ಮುಗಿಸಿ ಸಂಜೆ ೫ ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಯತ್ತ ಹೊರಟ್ಟಿದ್ದರು. ಹೂಡಿ ಸೇತುವೆ ಮೇಲೆ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವಾಗಿದೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆಯೇ ಸುರೇಶ್ ಮೃತಪಟ್ಟಿದ್ದಾರೆ. ಅಪಘಾತ ಎಸಗಿದ ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿದ ವಾಹನ ಹಾಗೂ ಅದರ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.