ಮಹಾದೇವ್ ಆ್ಯಪ್ ಬ್ಯಾನ್: ಕೊನೆಗೂ ಕೇಂದ್ರ ಸರ್ಕಾರಕ್ಕೆ ಪ್ರಜ್ಞೆ ಬಂದಿದೆ ಎಂದ ಭೂಪೇಶ್ ಬಘೇಲ್

bhoopesh
Published on

ಛತ್ತೀಸ್‌ಗಢ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಮಧ್ಯೆ, ಬೆಟ್ಟಿಂಗ್‌ಗೆ ಮಹದೇವ್ ಆ್ಯಪ್ ಬಳಕೆಯಾಗುತ್ತಿರುವ ವಿಷಯವು ವೇಗವನ್ನು ಪಡೆಯುತ್ತಿದೆ. ಏತನ್ಮಧ್ಯೆ, ಈ ಬೆಟ್ಟಿಂಗ್ ಆಪ್ ಸೇರಿದಂತೆ 22 ಅಕ್ರಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ನಂತರ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿಕೆ ಬೆಳಕಿಗೆ ಬಂದಿದ್ದು, ಕೊನೆಗೂ ಸರ್ಕಾರಕ್ಕೆ ಬುದ್ಧಿ ಬಂದಿದೆ ಎಂದು ತಿಳಿಸಿದ್ದಾರೆ.

ಸಿಎಂ ಬಘೇಲ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಹೀಗೆ ಬರೆದಿದ್ದಾರೆ... 'ಕೊನೆಗೆ ಕೇಂದ್ರ ಸರ್ಕಾರಕ್ಕೆ ಪ್ರಜ್ಞೆ ಬಂದಿದೆ. 'ಮಹಾದೇವ್ ಆಪ್' ಅನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಈ ಬೆಟ್ಟಿಂಗ್ ಆಪ್ ಅನ್ನು ಕೇಂದ್ರ ಸರ್ಕಾರ ಏಕೆ ಬ್ಯಾನ್ ಮಾಡುತ್ತಿಲ್ಲ ಎಂದು ಹಲವು ತಿಂಗಳುಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. 28 ರಷ್ಟು ಜಿಎಸ್‌ಟಿಯ ದುರಾಸೆಯಿಂದ ಬಹುಶಃ ನಿಷೇಧ ಹೇರಲಾಗುತ್ತಿಲ್ಲ ಅಥವಾ ಬಿಜೆಪಿ ಆಪ್ ಆಪರೇಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ' ಎಂದು ನಾನು ಹೇಳಿದ್ದೆ.

ಶೀಘ್ರವಾಗಿ ಬಂಧಿಸುವಂತೆ ಬಘೆಲ್ ಒತ್ತಾಯ

ಭೂಪೇಶ್ ಬಘೆಲ್ ಅವರು ಹೀಗೆ ಬರೆದಿದ್ದಾರೆ, 'ಇಡಿ ತಿಂಗಳಿನಿಂದ ಈ ವಿಷಯವನ್ನು ತನಿಖೆ ನಡೆಸುತ್ತಿರುವುದು ಆಶ್ಚರ್ಯಕರವಾಗಿದೆ. ಇನ್ನೂ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಈಗ ಕೇಂದ್ರ ಸರ್ಕಾರಕ್ಕೆ ಬುದ್ಧಿ ಬಂದಿದ್ದು, ಈ ಆಪ್ ಆಪರೇಟರ್ ಗಳನ್ನೂ ದುಬೈನಿಂದಲೇ ಬಂಧಿಸಿ ಆದಷ್ಟು ಬೇಗ ಭಾರತಕ್ಕೆ ಕರೆತರುವುದು ಒಳಿತು. ಛತ್ತೀಸ್‌ಗಢ ಪೊಲೀಸರು ಈತನ ವಿರುದ್ಧ ಮೊದಲು ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು. ಛತ್ತೀಸ್‌ಗಢ ಪೊಲೀಸರು ಆತನನ್ನು ರಿಮಾಂಡ್‌ಗೆ ತೆಗೆದುಕೊಂಡು ವಿಚಾರಣೆ ಮಾಡಲು ಬಯಸಿದ್ದಾರೆ. ಏಕೆಂದರೆ ಇಲ್ಲಿ ಮೊದಲು ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಮಹದೇವ್ ಬೆಟ್ಟಿಂಗ್ ಆಪ್ ಎಂದರೇನು? 

ಮಹದೇವ್ ಬೆಟ್ಟಿಂಗ್ ಆಪ್ ಎಂಬುದು ಆನ್‌ಲೈನ್ ಬೆಟ್ಟಿಂಗ್‌ಗಾಗಿ ಮಾಡಲಾದ ಅಪ್ಲಿಕೇಶನ್ ಆಗಿದೆ, ಇದರಲ್ಲಿ ಬಳಕೆದಾರರು ಕಾರ್ಡ್, ಪೋಕರ್ ಮುಂತಾದ ಆಟಗಳನ್ನು ಆಡುತ್ತಿದ್ದರು. ಇದರ ನೆರವಿನಿಂದ ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್ ಮುಂತಾದ ಕ್ರೀಡೆಗಳಲ್ಲದೆ ಚುನಾವಣೆಯಲ್ಲೂ ಜನರು ಬೆಟ್ಟಿಂಗ್ ನಡೆಸುತ್ತಿದ್ದರು, ಇದು ಸಂಪೂರ್ಣವಾಗಿ ಅಕ್ರಮವಾಗಿದೆ. ಬೆಟ್ಟಿಂಗ್ ಜಾಲ ವೇಗವಾಗಿ ಹರಡಲು ಆರಂಭಿಸಿದಾಗ, ತನಿಖೆ ಪ್ರಾರಂಭವಾಯಿತು. ಛತ್ತೀಸ್‌ಗಢದಲ್ಲಿ ಗರಿಷ್ಠ ಖಾತೆಗಳನ್ನು ತೆರೆಯಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದಾದ ನಂತರ ಇಡಿ ಕೂಡ ಇದರಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪಾತ್ರವನ್ನು ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net