ಗುಜರಾತ್​ನ 17ನೇ ಸಿಎಂ ಆಗಿ ಭೂಪೇಂದ್ರ ಪಟೇಲ್​​ ಪ್ರಮಾಣ ವಚನ

patel
Published on

ಗಾಂಧಿನಗರ: ಘಾಟ್​ಲೋಡಿಯಾದ ಬಿಜೆಪಿ ಶಾಸಕರಾದ ಭೂಪೇಂದ್ರಭಾಯಿ ಪಟೇಲ್​ ಅವರು ಇಂದು ಗುಜರಾತ್​ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 59 ವರ್ಷ ವಯಸ್ಸಿನ ಪಟೇಲ್​ ಅವರು ರಾಜ್ಯದ 17ನೇ ಮುಖ್ಯಮಂತ್ರಿಗಳಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಷಾ, ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್​ ಚೌಹಾನ್ ಮತ್ತು ಗೋವಾ ಸಿಎಂ ಪ್ರಮೋದ್​ ಸಾವಂತ್​ ಮತ್ತು ರಾಜ್ಯದ ಹಿರಿಯ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ, ಪಟೇಲ್​ ಅವರಿಗೆ ಶುಭ ಕೋರಿದರು.

ಶನಿವಾರದಂದು ನಿಕಟಪೂರ್ವ ಸಿಎಂ ವಿಜಯ್​ ರೂಪಾನಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಹುದ್ದೆ ತೆರವಾಗಿತ್ತು. ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೂಪೇಂದ್ರ ಪಟೇಲ್​ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.

2017 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾದ ಭೂಪೇಂದ್ರ ಪಟೇಲ್​ ಅವರು, ಕಾಂಗ್ರೆಸ್​ನ ಶಶಿಕಾಂತ್​ ಪಟೇಲ್​ ವಿರುದ್ಧ 1 ಲಕ್ಷ 17 ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆದ್ದಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net