

ಬೆಂಗಳೂರು: ರಾಜ್ಯದ 31 ತಾಲೂಕುಗಳಲ್ಲಿ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ‘ಭೂ ಸುರಕ್ಷಾ’ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ(209 talukas will start in 2nd phase).
2ನೇ ಹಂತದಲ್ಲಿ 209 ತಾಲೂಕುಗಳಲ್ಲಿ ಗಣಕೀಕರಣ ನಡೆಸುವ ಉದ್ದೇಶ ಹೊಂದಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುಡಿಬಂಡೆಯಲ್ಲಿ ಬುಧವಾರ ಚಾಲನೆ ನೀಡಲಿದ್ದಾರೆ. ಆ ಮೂಲಕ 2ನೇ ಹಂತದ ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ ದೊರೆಯಲಿದೆ.
ಈ ತಾಲೂಕುಗಳಿಗೆ ಉಳಿದ 209 ಕಚೇರಿಗಳಲ್ಲಿ ಗಣಕೀಕರಣಕ್ಕೆ ತಲಾ 6 ಡೆಸ್ಕ್ ಟಾಪ್ ಕಂಪ್ಯೂಟರ್, 3 ಸ್ಕಾೃನರ್, 6 ಡೇಟಾ ಎಂಟ್ರಿ ಅಪರೇಟರ್‌ಗಳನ್ನು ಒದಗಿಸಲಾಗಿದೆ.
ಈಗಾಗಲೇ 31 ತಾಲೂಕುಗಳಲ್ಲಿ ಪೈಲೆಟ್ ಆಗಿ ಗಣಕೀಕರಣ ಕಾರ್ಯ ಪ್ರಾರಂಭಿಸಲಾಗಿದೆ. ಕಾರಟಗಿ, ಚಿಂಚೋಳಿ, ಯಳಂದೂರು, ಕುರುಗೋಡು, ಯಾದಗಿರಿ, ಹೆಬ್ರಿ ಮತ್ತು ಮೊಳಕಾಲ್ಮುರು ತಾಲೂಕು ಕಚೇರಿಗಳಲ್ಲಿ ಎ ಮತ್ತು ಬಿ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿದೆ. ಎಲ್ಲ ಪೈಲೆಟ್ ತಾಲೂಕು ಕಚೇರಿಗಳಿಂದ ಈವರೆಗೆ 14,87,682 ಕಡತಗಳು ಮತ್ತು 1,20,805 ವಹಿಗಳನ್ನು ಒಳಗೊಂಡಂತೆ 7.95 ಕೋಟಿ ಪುಟಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಡಿಐಎಲ್‌ಆರ್‌ಎಂಪಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನ ಮತ್ತು ರಾಜ್ಯ ಸರ್ಕಾರವು ಒದಗಿಸುವ ಅನುದಾನದಿಂದ ಭೂ ಸುರಕ್ಷಾ ಯೋಜನೆಯನ್ನು ರಾಜ್ಯಾದ್ಯಂತ ನಿರ್ವಹಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕಾೃನಿಂಗ್ ಮತ್ತು ಅಪ್ ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದ್ದು ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ.